ಮೈಸೂರು : ಮೆದುಳು ನಿಷ್ಕ್ರಿಯಗೊಂಡಿದ್ದ ಪುತ್ರನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಪೋಷಕರು ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ನಿವಾಸಿ ಶರತ್(19) ಡಿಸೆಂಬರ್ 24ರಂದು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಯಿತು. ಅಲ್ಲಿನ ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸಗಾಗಿ ಮೈಸೂರಿನ ಸ್ಪಂದನಾ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಆರೋಗ್ಯ ಸ್ಥಿತಿ ಗಂಭೀರಗೊಂಡ ಕಾರಣ ಡಿ. 24ರ ರಾತ್ರಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಎರಡು ದಿನಗಳ ಚಿಕಿತ್ಸೆ ಬಳಿಕ ನಿನ್ನೆ ಮಧ್ಯಾಹ್ನ ಮೆದುಳು ನಿಷ್ಕ್ರಿಯಗೊಂಡಿರುವುದು ಧೃಢವಾಯಿತು. ಹೀಗಾಗಿ ಅಂಗಾಂಗ ದಾನದ ಕುರಿತು ಪೋಷಕರಿಗೆ ವೈದ್ಯರು ಮಾಹಿತಿ ನೀಡಿದ್ದರು. ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ಶರತ್ ಅಂಗಾಂಗ ದಾನ ಮಾಡಲು ಪೋಷಕರು ನಿರ್ಧರಿಸಿದ್ದರು.
ಅಂಗಾಂಗ ದಾನ ಶಿಷ್ಟಾಚಾರ ಪಾಲನೆ ಮೂಲಕ ಶರತ್ ಅವರ ಹೃದಯ, 2 ಕಿಡ್ನಿಗಳು, 1 ಯಕೃತ್ತು, 1 ಮೇದೋಜೀರಕ ಗ್ರಂಥಿ, ಕಾರ್ನಿಯಾವನ್ನು ಪಡೆದು ಅಗತ್ಯವಿದ್ದವರಿಗೆ ಅಳವಡಿಸಲು ಕಳುಹಿಸಿಕೊಡಲಾಯಿತು.










