ಚಿಕ್ಕಮಗಳೂರು : ಸಾಹಿತಿ ಗಿರೀಶ್ ಕಾರ್ನಾಡ್ ಅವರ ನಾಟಕಗಳು ಮತ್ತು ಕೃತಿಗಳು ಸಮಾಜವನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಸಾಹಿತಿ ಬಿ.ತಿಪ್ಪೇರುದ್ರಪ್ಪ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಗರದ ಸುವರ್ಣ ಕನ್ನಡ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಸಾಹಿತಿ ಗಿರೀಶ್ ಕಾರ್ನಾಡ್ ಅವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಿರೀಶ್ ಕಾರ್ನಾಡ್ ಅವರು ನಾಡು ಮತ್ತು ನುಡಿಗೆ ಸಲ್ಲಿಸಿರುವ ಸೇವೆ ಅವಿಸ್ಮರಣೀಯ, ಅವರೊಬ್ಬ ಭಿನ್ನವಾಗಿ ಆಲೋಚಿಸುತ್ತಿದ್ದ ಅಪರೂಪದ ಸಾಹಿತಿ ಎಂದರು.
ಸಾಹಿತಿ ಬೆಳವಾಡಿ ಮಂಜುನಾಥ್ ಮಾತನಾಡಿ ಕನ್ನಡದ ನವ್ಯ ನಾಟಕಗಳಿಗೆ ಹೊಸ ರೂಪ ಕೊಟ್ಟವರು ಗಿರೀಶ್ ಕಾರ್ನಾಡ್, ಭಾರತೀಯ ನಾಟಕಗಳನ್ನು ಮತ್ತು ಸಾಹಿತ್ಯವನ್ನು ಪಾಶ್ಚಾತ್ಯ ಶೈಲಿಯಲ್ಲಿ ಹೇಗೆ ನೋಡಬಹುದು ಎಂಬುದನ್ನು ತೋರಿಸಿಕೊಟ್ಟವರು ಅವರು ಎಂದು ತಿಳಿಸಿದರು.
ಸಿಪಿಐ ಮುಖಂಡ ಬಿ.ಅಮ್ಜದ್ ಮಾತನಾಡಿ ಕಾರ್ನಾಡ್ ಅವರ ನಿಧನದಿಂದಾಗಿ ನಾಟಕ, ಸಿನಿಮಾ, ಸಾಹಿತ್ಯ ಕ್ಷೇತ್ರ ಸೇರಿದಂತೆ ನಾಡಿಗೆ ಮತ್ತು ದೇಶಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಮಾತನಾಡಿ ಗಿರೀಶ್ ಕಾರ್ನಾಡ್ ಅವರ ನಾಟಕಗಳು ಮತ್ತು ಕೃತಿಗಳಿಂದ ಸಮಾಜಕ್ಕಾಗಿರುವ ಪ್ರಭಾವ ಊಹಿಸಲು ಅಸಾಧ್ಯವಾದುದು ಎಂದು ಹೇಳಿದರು.
ಇದೇ ವೇಳೆ ಗಿರೀಶ್ ಕಾರ್ನಾಡ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು, ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ, ಖಜಾಂಚಿ ಪ್ರೊ|| ಕೆ.ಎನ್.ಲಕ್ಷ್ಮೀಕಾಂತ್, ತಾಲ್ಲೂಕು ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಸಾಹಿತಿ ರವೀಶ್ ಬಸಪ್ಪ, ಕಳವಾಸೆ ರವಿ ಹಾಜರಿದ್ದರು.
Home ಸ್ಥಳಿಯ ಸುದ್ದಿ ಸಾಹಿತಿ ಗಿರೀಶ್ ಕಾರ್ನಾಡ್ ಅವರ ನಾಟಕಗಳು ಮತ್ತು ಕೃತಿಗಳು ಸಮಾಜವನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿವೆ...










