ಸಿಆರ್‌ಪಿಎಫ್‌ ಪರೀಕ್ಷೆಯಲ್ಲಿ ಕನ್ನಡ ನಿರ್ಲಕ್ಷ್ಯ – ಮರು ಪರೀಕ್ಷೆಗೆ ಸಿದ್ದರಾಮಯ್ಯ, ಕುಮಾರಸ್ವಾಮಿ ಆಗ್ರಹ…

44
firstsuddi

ಬೆಂಗಳೂರು : ಕೇಂದ್ರ ಮೀಸಲು ಪಡೆ(ಸಿಆರ್‌ಪಿಎಫ್‌)ನೇಮಕಾತಿಗೆ ನಡೆಸಲಾದ ಪರೀಕ್ಷೆಯಲ್ಲಿ ಕನ್ನಡ ನಿರ್ಲಕ್ಷ್ಯ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಮರು ಪರೀಕ್ಷೆಗೆ ಆಗ್ರಹಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕೇಂದ್ರ ಮೀಸಲು ಪೊಲೀಸ್ ಪಡೆಯ ನೇಮಕಾತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯುವುದನ್ನು ಕಡ್ಡಾಯಗೊಳಿಸಿರುವುದನ್ನು ತಕ್ಷಣ ಸಡಿಲಿಸಿ, ಕನ್ನಡ ಭಾಷೆಯಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟು ಈ ಅನ್ಯಾಯವನ್ನು ಸರಿಪಡಿಸಬೇಕೆಂದು ಪ್ರಧಾನಿ ಮೋದಿ ಅವರನ್ನು ಆಗ್ರಹಪಡಿಸುತ್ತಿದ್ದೇನೆ ಎಂದಿದ್ದಾರೆ.

ಭಾಷೆಯೇ ಜ್ಞಾನ ಅಲ್ಲ, ಅದು ಜ್ಞಾನದ ಸಂವಹನ ಸಾಧನ ಅಷ್ಟೆ. ಕನ್ನಡ ಭಾಷಾ ಮಾಧ್ಯಮದಲ್ಲಿ ಓದಿದ ನಮ್ಮ ಯುವಜನರು ಜ್ಞಾನಿಗಳಾಗಿದ್ದರೂ ಭಾಷೆಯ ಸಮಸ್ಯೆಯಿಂದಾಗಿ ಕೇಂದ್ರ ಸರ್ಕಾರ ನಡೆಸುವ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಇದು ಅನ್ಯಾಯ. ರಾಜ್ಯದಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದಾಗಿ ರಾಜ್ಯದಲ್ಲಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಭಾಷಾ ನೀತಿಯಿಂದಾಗಿ ಕೇಂದ್ರದಲ್ಲಿ ಕನ್ನಡಿಗ ಯುವಜನರು ಉದ್ಯೋಗ ವಂಚಿತರಾಗುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಿದೆ, ಯುವಜನರ ಭವಿಷ್ಯ ಮಂಕಾಗುತ್ತಿದೆ ಎಂದರು.

ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯ ಭಾಷೆಗಳನ್ನು ಮೂಲೆಗೆ ತಳ್ಳಿ ಹಿಂದಿ ಭಾಷೆಯನ್ನು ನಮ್ಮ ತಲೆ ಮೇಲೆ ಹೇರುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಉದ್ಯಮ, ಉದ್ಯೋಗ, ಶಿಕ್ಷಣ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಹಿಂದಿ ಭಾಷೆಯ ಯಜಮಾನಿಕೆ ಹೆಚ್ಚಾಗುತ್ತಿದೆ. ಇದನ್ನು ಸಹಿಸಲು ಸಾಧ್ಯ ಇಲ್ಲ. ಈಗಲೂ ಕಾಲ ಮಿಂಚಿಲ್ಲ ಪ್ರಧಾನಿ ಮೋದಿ ಅವರು ತಕ್ಷಣ ಮಧ್ಯೆ ಪ್ರವೇಶಿಸಿ ಸಿಆರ್‌ಪಿಎಫ್‌  ಪರೀಕ್ಷೆಗಳನ್ನು ಕನ್ನಡವೂ ಸೇರಿದಂತೆ ರಾಜ್ಯ ಭಾಷೆಗಳಲ್ಲಿ ಬರೆಯಲು ಅನುಕೂಲ ಮಾಡಿಕೊಡಬೇಕು. ರಾಜ್ಯದ ಮುಖ್ಯಮಂತ್ರಿ
ಬಸವರಾಜ ಬೊಮ್ಮಾಯಿ ಅವರು ಮತ್ತು ಬಿಜೆಪಿ ಸಂಸದರು ಇದಕ್ಕಾಗಿ ಪ್ರಧಾನಿಗಳ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

ಇನ್ನು ಹೆಚ್.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿ ಕೇಂದ್ರ ಬಿಜೆಪಿ ಸರಕಾರ ಮತ್ತೆ ಕನ್ನಡಿಗರಿಗೆ ಉಂಡೆನಾಮ ಹಾಕಿದೆ. ಭಾನುವಾರ ನಡೆದ ಕೇಂದ್ರೀಯ ಮೀಸಲು ಪಡೆ (ಸಿಆರ್‌ಪಿಎಫ್‌) ನೇಮಕದ ಕಂಪ್ಯೂಟರ್ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶವನ್ನೇ ಕೊಟ್ಟಿಲ್ಲ. ಹಿಂದಿ, ಇಂಗ್ಲಿಷ್ ಭಾಷೆಯಲ್ಲಷ್ಟೇ ಪರೀಕ್ಷೆಗೆ ಅವಕಾಶ ಕೊಡಲಾಗಿದೆ. ಇದು ಖಂಡನೀಯ ಎಂದು ಹೇಳಿದ್ದಾರೆ.

9212 ಹುದ್ದೆಗಳಿಗೆ ಈ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಕರ್ನಾಟಕದ 466 ಹುದ್ದೆಗಳೂ ಸೇರಿವೆ. ದುರಂತವೆಂದರೆ, ಇಷ್ಟು ಹುದ್ದೆಗಳನ್ನು ಬಯಸುವ ಅಭ್ಯರ್ಥಿಗಳು ಹಿಂದಿ,ಇಂಗ್ಲಿಷ್ ನಲ್ಲಿ ಪರೀಕ್ಷೆ ಬರೆದಿದ್ದಾರೆ, ಬರೆಯುವ ಅನಿವಾರ್ಯ ಸೃಷ್ಟಿಸಲಾಗಿದೆ. ಮಾತೃಭಾಷೆಯಲ್ಲಿ ಬರೆಯುವುದನ್ನು ನಿರಾಕರಿಸುವುದು ಎಂದರೆ ಸಂವಿಧಾನಕ್ಕೆ ಎಸಗಿದ ಅಪಚಾರ. ಕೇಂದ್ರ ಸರಕಾರ ತನ್ನ ಸುಪರ್ದಿಯಲ್ಲಿ ನಡೆಸುವ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷಿನಲ್ಲೇ ನಡೆಸುತ್ತಿದೆ. ಕೇವಲ ಹಿಂದಿ ಕೇಂದ್ರಿತ ನೇಮಕಾತಿ ಪ್ರಕ್ರಿಯೆ ಇತರೆ ಭಾಷಿಕರನ್ನು ಉದ್ಯೋಗ ವಂಚಿತರನ್ನಾಗಿಸುವುದು ಮಾತ್ರವಲ್ಲ, ಅನ್ಯಭಾಷೆಗಳನ್ನು ಹತ್ತಿಕ್ಕಿ ಹಿಂದಿ ಹೇರಿಕೆ ಮಾಡುವುದಷ್ಟೇ ದುರುದ್ದೇಶ. ಇದು ಸ್ಪಷ್ಟ ಎಂದಿದ್ದಾರೆ.