ಮುಂಬೈ : ಐಪಿಎಲ್ ಪಂದ್ಯ ಆರಂಭವಾಗಲು ಇನ್ನು ಕೇವಲ 20 ದಿನ ಮಾತ್ರ ಬಾಕಿಯಿದ್ದು, ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ದೀಪಕ್ ಚಹರ್ ಹಾಗೂ ತಂಡದ 10 ಮಂದಿ ಸಹಾಯಕ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದ್ದು, ಐಪಿಎಲ್ ಪಂದ್ಯ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಮಾರ್ಚ್ನಲ್ಲಿ ನಡೆಯಬೇಕಿದ್ದ ಐಪಿಎಲ್ ಪಂದ್ಯ ಕೊರೊನಾ ವೈರಸ್ ಭೀತಿಯಿಂದ ಮುಂದೂಡಲ್ಪಟ್ಟಿತು. ಬಳಿಕ ಬಿಸಿಸಿಐ ಕೊರೊನಾ ಅಟ್ಟಹಾಸ ಕಡಿಮೆ ಇರುವ ಯುಎಇಯಲ್ಲಿ ಸೆ. 19ರಿಂದ ಐಪಿಎಲ್ ಪಂದ್ಯ ನಡೆಸಲು ತೀರ್ಮಾನಿಸಿತ್ತು. ಇದರಿಂದ ಆಗಸ್ಟ್ 21ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಯುಎಇಗೆ ತೆರಳಿತ್ತು. ಎಲ್ಲಾ ಆಟಗಾರರಿಗೂ ಭಾರತದಲ್ಲೂ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಬಳಿಕ ಯುಎಇಗೆ ತೆರಳಿದ್ದ ತಂಡ ಅಭ್ಯಾಸ ಆರಂಭಿಸಬೇಕಿತ್ತು. ಆದರೆ ತಂಡದ ಸಿಬ್ಬಂಧಿಗಳಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಸೆ.1ರಿಂದ ಅಭ್ಯಾಸ ಆರಂಭಿಸಲಿದೆ ಎನ್ನಲಾಗಿದೆ.
ಈ ನಡುವೆ ಮುಂದಿನ ವಾರ ಪಂದ್ಯದ ವೇಳಾಪಟ್ಟಿ ತಯಾರಿಸಲು ಮುಂದಾಗಿದ್ದ ಬಿಸಿಸಿಐ ಕೊರೊನಾ ಸೋಂಕು ಸ್ವಲ್ಪ ಮಟ್ಟಿಗೆ ಹಿಡಿತಕ್ಕೆ ಬಂದ ಬಳಿಕ ವೇಳಾಪಟ್ಟಿ ಬಿಡುಗಡೆಗೊಳಿಸಲು ತೀರ್ಮಾನಿಸಿದ್ದು, ಪರಿಸ್ಥಿತಿ ನಿಭಾಯಿಸಲು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದೇವೆ. ಈಗ ಪಂದ್ಯ ಕೂಡಲೇ ಆರಂಭ ಮಾಡಬೇಕು ಎಂಬ ಯಾವುದೇ ಯೋಜನೆಯಿಲ್ಲ. ಪರಿಸ್ಥಿತಿ ಹಿಡಿತಕ್ಕೆ ಬಂದ ಬಳಿಕ ವೇಳಾಪಟ್ಟಿ ಬಿಡುಗಡೆಗೊಳಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.










