ನವದೆಹಲಿ : ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಇಂದು ನಿವೃತ್ತರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ನಡೆಸುತ್ತಿರುವ ಕಲಾಪಗಳನ್ನು ನೇರಪ್ರಸಾರ ಮಾಡಲಾಗುತ್ತಿದೆ. ಸಿಜೆಐ ಎನ್.ವಿ.ರಮಣ ಅವರು ನಿಯೋಜಿತ ಸಿಜೆಐ ಯು.ಯು.ಲಲಿತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರೊಂದಿಗೆ ಪೀಠವನ್ನು ಹಂಚಿಕೊಳ್ಳಲಿದ್ದಾರೆ.
ತಮ್ಮ ನಿವೃತ್ತಿಯ ಕುರಿತು ಮಾತನಾಡಿರುವ ಸಿಜೆಐ ಎನ್.ವಿ.ರಮಣ ಅವರು, ನಾನು ಮುಖ್ಯ ನ್ಯಾಯಮೂರ್ತಿಯಾಗಿ ನನ್ನ ಕರ್ತವ್ಯವನ್ನು ಸಾಧ್ಯವಿರುವ ರೀತಿಯಲ್ಲಿ ನಿರ್ವಹಿಸಿದ್ದೇನೆ. ನಿಮಗೆಲ್ಲರಿಗೂ ತಿಳಿದಿರುವ ಮೂಲಸೌಕರ್ಯ ಮತ್ತು ನ್ಯಾಯಾಧೀಶರ ನೇಮಕಾತಿ ಎಂಬ ಎರಡು ವಿಷಯಗಳನ್ನು ನಾನು ಕೈಗೆತ್ತಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಮತ್ತು ಕೊಲಿಜಿಯಂನಲ್ಲಿ ನನ್ನ ಸಹೋದರ ಮತ್ತು ಸಹೋದರಿ ನ್ಯಾಯಾಧೀಶರು ನೀಡಿದ ಬೆಂಬಲಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ನಾವು ಹೈಕೋರ್ಟ್ ಗಳಲ್ಲಿ ಸುಮಾರು 224 ನ್ಯಾಯಾಧೀಶರನ್ನು ಯಶಸ್ವಿಯಾಗಿ ನೇಮಕ ಮಾಡಿದ್ದೇವೆ. ನಿರ್ಗಮಿಸುವ ಸಿಜೆಐ ಅವರನ್ನು ಬೀಳ್ಕೊಡಲು ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಿಜೆಐ ಆಗಿ ಜವಾಬ್ದಾರಿ ನಿರ್ವಹಿಸಿದ ದಿನಗಳ ಕುರಿತು ಮಾತನಾಡಿದ್ದಾರೆ.
ಎನ್ ವಿ ರಮಣ ಅವರು, ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ. ಇಂದು ಅವರ ಅಧಿಕಾರ ಅವಧಿ ಮುಕ್ತಾಯವಾಗಲಿದೆ. ನಾಳೆ(ಆ. 27) ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಯುಯು ಲಲಿತ್ ಅಧಿಕಾರ ಸ್ವೀಕರಿಸಲಿದ್ದಾರೆ.










