ಕೊಡಗು : ಕೊರೊನಾ ಲಸಿಕೆ ನೀಡುವ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದ್ದು, ನನ್ನ ಧಮ್ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರಿಗೆ ಧಮ್ ಇದ್ದರೆ ಚಿದಂಬರಂ ಮುಂದೆ ನಿಂತು ಮಾತನಾಡಲಿ ಎಂದು ನಳೀನ್ ಕುಮಾರ್ ಕಟೀಲ್ ಅವರು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಮಡಿಕೇರಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಭೆಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಯಾವ ಸಂದರ್ಭದಲ್ಲಿ ಏನು ಕೊಡಬೇಕೋ ಅದು ಕೊಡುತ್ತದೆ. ಕೊರೊನಾ ಲಸಿಕೆ ಬಂದ ಸಂದರ್ಭದಲ್ಲಿ ಆತ್ಮ ನಿರ್ಭರ ಭಾರತ ಅಡಿಯಲ್ಲಿ ಯಾವೆಲ್ಲಾ ಜಿಲ್ಲೆಗೆ ಹೇಗೆ ಲಸಿಕೆ ತಲುಪಿಸಬೇಕು ಎಂಬುವುದು ಸರ್ಕಾರದ ತೀರ್ಮಾನವಾಗಿದೆ. ಸಿದ್ದರಾಮಯ್ಯ ಅವರಿಗೆ ಧಮ್ ಇದ್ದರೆ ಒಮ್ಮೆ ಚಿದಂಬರಂ ಅವರ ಮುಂದೆ ನಿಲ್ಲಲಿ ಎಂದು ಟಾಂಗ್ ನೀಡಿದರು.
ಸಿದ್ದರಾಮಯ್ಯ ಅವರು ಮೊದಲು ಸಂಸ್ಕಾರ ಮತ್ತು ಸಂಸ್ಕೃತಿ ಇಟ್ಟುಕೊಂಡು ಮಾತನಾಡುವುದನ್ನು ಕಲಿಯಬೇಕು. ರಾಜ್ಯದಲ್ಲಿ ನಡೆಯುತ್ತಿರುವ ಆರ್.ಆರ್. ನಗರ ಹಾಗೂ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.










