ಮಡಿಕೇರಿ: ಒಬ್ಬ ವ್ಯಕ್ತಿಯಾಗಿ ಮೋದಿ ನಮಗೆ ಎದುರಾಳಿಯೇ ಅಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ, ಸಿದ್ದರಾಮಯ್ಯ ಅವರು ಬರೀ ಸೌಂಡ್ ಬಾಕ್ಸ್. ಸೌಂಡ್ ಬಾಕ್ಸ್ ಬರೀ ಅಬ್ಬರ ಮಾಡುತ್ತೇ ಅಷ್ಟೇ ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.
ಕೊಡಗಿನ ಸೋಮವಾರಪೇಟೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಅನುಕರಿಸಿ, ಹೂಂಕರಿಸಿ ವ್ಯಂಗ್ಯ ಮಾಡಿದರು. ಸಿದ್ದರಾಮಯ್ಯ ಅವರು ಬರೀ ಸೌಂಡ್ ಬಾಕ್ಸ್. ಸೌಂಡ್ ಬಾಕ್ಸ್ ಬರೀ ಅಬ್ಬರ ಮಾಡುತ್ತೆ ಅಷ್ಟೇ. ಆದರೆ ಕೆಲಸ ಮಾಡುವ ಅನುಭವ, ಕಾಳಜಿ ಸಿದ್ದರಾಮಯ್ಯನವರಿಗೆ ಇಲ್ಲ. ಬರೀ ದ್ವೇಷ, ಅಧಿಕಾರ ದುರ್ಬಳಕೆ ಮಾಡುವುದಷ್ಟೇ ಇವರ ಕೆಲಸ. ಈಗ ಲೂಟಿ ಮಾಡಿರುವ ಹಣವನ್ನು ಚುನಾವಣೆಯಲ್ಲಿ ದುರ್ಬಳಕೆ ಮಾಡಲು ಹೊರಟಿದ್ದಾರೆ. ಹಣ ಬಲದ ಮೇಲೆ ಗೆಲ್ಲುತ್ತೇವೆ ಎನ್ನುವ ಹುಚ್ಚು ವಿಶ್ವಾಸದಲ್ಲಿ ಇದ್ದಾರೆ. ಆದರೆ ಸಂಪೂರ್ಣ ಸೋಲುತ್ತಾರೆ ಎಂದರು.
ಕಳೆದ ಬಾರಿ ಒಂದೇ ಒಂದು ಸ್ಥಾನ ಗೆದ್ದಿದ್ದರು. ಆದರೆ ಈ ಬಾರಿ ಅದನ್ನು ಕಳೆದುಕೊಳ್ಳುತ್ತಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೃದಯವಂತ ಡಾ. ಮಂಜುನಾಥ್ ಗೆಲ್ಲುತ್ತಾರೆ. ಆ ಮೂಲಕ ಸಿದ್ದರಾಮಯ್ಯ, ಡಿಕೆಶಿ ಟೀಂಗೆ ಬುದ್ಧಿ ಕಲಿಸಲಿದ್ದಾರೆ. ಅಲ್ಲದೇ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಮುಕ್ತ ದೇಶವಾಗಬೇಕಿತ್ತು. ಕಾಂಗ್ರೆಸ್ ರಾಜ್ಯಕ್ಕೆ ಒಂದು ಶಾಪವಿದ್ದಂತೆ. ಈ ಶಾಪ ಮುಕ್ತ ಮಾಡಲು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಜನ ಸೋಲಿಸಲಿದ್ದಾರೆ ಎಂದು ಕಿಡಿಕಾರಿದರು.










