ನವದೆಹಲಿ : ದೇಶಾದ್ಯಂತ ಕೊರೊನಾ ಪ್ರಕರಣಗಳು ಹೆಚ್ವಾಗುತ್ತಿರುವ ಹಿನ್ನೆಲೆ ಸಿಬಿಎಸ್ಇ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) ಹತ್ತನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ ಹಾಗೂ ಹನ್ನೆರಡನೇ ತರಗತಿ ಪರೀಕ್ಷೆಯನ್ನು ಮುಂದೂಡಲಾಗಿದೆ.
ಮಂಡಳಿಯು ವಸ್ತುನಿಷ್ಠ ಮಾನದಂಡದ ಆಧಾರದ ಮೇಲೆ ಹತ್ತನೇ ತರಗತಿಯ ವಿದ್ಯಾರ್ಥಿಗಳ ಫಲಿತಾಂಶವನ್ನು ನೀಡಲಾಗುವುದು ಮತ್ತು ಹನ್ನೆರಡನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು. ಪರೀಕ್ಷೆಯ ಪರಿಸ್ಥಿತಿಯನ್ನು ಜೂನ್ 1ರಂದು ಮಂಡಳಿಯು ಪರಿಶೀಲಿಸುತ್ತದೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.
ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಕಾರಣ 2021ರ ಸಿಬಿಎಸ್ಇ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲು ಮತ್ತು ರದ್ದುಗೊಳಿಸಲು ವಿದ್ಯಾರ್ಥಿಗಳು ಒತ್ತಾಯಿಸಿದ್ದರು. ‘ಕ್ಯಾನ್ ಸೆಲ್ ಬೋರ್ಡ್ಎಕ್ಸಾಮ್ಸ್ 2021’ ಎಂಬ ಹ್ಯಾಶ್ ಟ್ಯಾಗ್ ನಡಿ ಪರೀಕ್ಷೆ ರದ್ದುಗೊಳಿಸಲು ಟ್ವಿಟರ್ ನಲ್ಲಿ ಆಗ್ರಹಿಸಲಾಗಿತ್ತು. ಈ ಮನ್ನ ಬಿಡುಗಡೆಯಾಗಿದ್ದ ವೇಳಾಪಟ್ಟಿಯ ಪ್ರಕಾರ ಮೇ 4ರಿಂದ ಜೂನ್ 10ರ ವರೆಗೆ ಎರಡು ತರಗತಿಹಳ ಪರೀಕ್ಷೆ ನಡೆಯಲಿದೆ ಎನ್ನಲಾಗಿತ್ತು. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಮತ್ತು ಇತರ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಈ ಪ್ರಕಟಣೆ ಹೊರಡಿಸಲಾಗಿದೆ.










