ಸಿಲಿಂಡರ್ ಸ್ಫೋಟಗೊಂಡು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಗಂಭೀರ ಗಾಯ.

30

ಹುಬ್ಬಳ್ಳಿ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 9 ಮಂದಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಸಾಯಿನಗರದ ಅಚ್ಚವ್ವನ ಕಾಲೊನಿಯ ಈಶ್ವರ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು 9 ಅಯ್ಯಪ್ಪ ಮಾಲಾಧಾರಿಗಳು ಗಂಭೀರ ಗಾಯಗೊಂಡಿದ್ದಾರೆ. ಬಹುತೇಕ ಎಲ್ಲರ ದೇಹ ಶೇ 50 ರಷ್ಟು ಸುಟ್ಟು ಹೋಗಿದ್ದು, 58 ವರ್ಷದ ಅಜ್ಜಾಸ್ವಾಮಿ ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಗಾಯಾಳುಗಳನ್ನು ರಾಜು ಹರ್ಲಾಪುರ, ಸಂಜಯ ಸವದತ್ತಿ, ವಿನಾಯಕ ಬಾತಕೇರ, ಪ್ರಕಾಶ ಬಾತಕೇರ, ಮಂಜು ತೋರದ, ಅಜ್ಜಾಸ್ವಾಮಿ, ಪ್ರವೀಣ ಚಲವಾದಿ, ತೇಜಸ್ ರೆಡ್ಡಿ ಮತ್ತು ಶಂಕರ ರಾಯನಗೌಡ್ರ ಎಂದು ಗುರುತಿಸಲಾಗಿದೆ. ಇವರೆಲ್ಲ ಸಾಯಿನಗರದ ನಿವಾಸಿಗಳು ಎಂದು ಹೇಳಲಾಗಿದೆ. ಈ ದುರಂತಕ್ಕೆ ಅಯ್ಯಪ್ಪ ಮಾಲಾಧಾರಿಯೊಬ್ಬರ ನಿದ್ದೆಗಣ್ಣು ಕಾರಣ ಎಂದು ಹೇಳಲಾಗಿದ್ದು, ಅಯ್ಯಪ್ಪ ಮಾಲೆ ಧರಿಸಿ ವೃತ ಅಚರಿಸುತ್ತಿದ್ದ ಇವರು, ಈಶ್ವರ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿದ್ದರು. ರಾತ್ರಿ ಮಲಗಿದ್ದಾಗ ಮಾಲಾಧಾರಿಯೊಬ್ಬರ ಕಾಲು ಸಿಲಿಂಡರ್‍ಗೆ ತಾಗಿ ಅದು ಉರುಳಿದೆ. ಈ ವೇಳೆ ರೆಗ್ಯೂಲೇಟರ್ ಸಡಿಲಗೊಂಡು ಗ್ಯಾಸ್ ಸೋರಿಕೆಯಾಗಿದೆ ಎಂದು ಹೇಳಲಾಗುತಿದೆ. ಇದೇ ವೇಳೆ ದೇವಸ್ಥಾನದಲ್ಲಿ ಹಚ್ಚಿದ್ದ ದೀಪಕ್ಕೆ ಗ್ಯಾಸ್ ತಾಗಿ ಬೆಂಕಿ ಹೊತ್ತುಕೊಂಡು ಸಿಲಿಂಡರ್ ಸ್ಫೋಟವಾಗಿದೆ. ದೇವಸ್ಥಾನದ ಪ್ರಾಂಗಣದಲ್ಲೆಲ್ಲಾ ಬೆಂಕಿಹೊತ್ತುಕೊಂಡಿದ್ದು, ಸ್ಥಳೀಯರು ಬೆಂಕಿಗೆ ತುತ್ತಾಗಿದ್ದ ಅಯ್ಯಪ್ಪ ಮಾಲಾಧಾರಿಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.