ಸುತ್ತಿಗೆಯಿಂದ ಹೊಡೆದು ಇಬ್ಬರು ಮಕ್ಕಳನ್ನು ಕೊಂದ ಪಾಪಿ ತಂದೆ!

57
firstsuddi

ಮಂಡ್ಯ: ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮರಲಗಾಲ ಗ್ರಾಮದಲ್ಲಿ ನಡೆದಿದೆ.

ಮರಲಗಾಲ ಗ್ರಾಮದ ಬಳಿಯ ಫಾರ್ಮ್ ಹೌಸ್‌ನಲ್ಲಿ ವಾಸವಿದ್ದ ಕುಟುಂಬದಲ್ಲಿ ಗಂಡ- ಹೆಂಡತಿ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಲ್ಲದೇ ಫಾರ್ಮ್ ಹೌಸ್‌ನಲ್ಲಿ ಕೆಲಸ ಮಾಡಲು ಇಟ್ಟುಕೊಂಡಿದ್ದ ಸುತ್ತಿಗೆಯಿಂದ ಹೊಡೆದು ಪುಟ್ಟ ಕಂದಮ್ಮಗಳನ್ನು ಕೊಲೆ ಮಾಡಿದ್ದಾನೆ.

ಆದರ್ಶ (4) ಮತ್ತು ಅಮೂಲ್ಯ (2) ತಂದೆಯಿಂದಲೇ ಕೊಲೆಯಾದ ದುರ್ದೈವಿ ಮಕ್ಕಳು. ಗುಲ್ಬರ್ಗ ಮೂಲದ ಶ್ರೀಕಾಂತ್ (29) ಮಕ್ಕಳನ್ನ ಕೊಂದು ಪತ್ನಿ ಕೊಲೆಗೂ ಯತ್ನಿಸಿರುವ ಪಾಪಿಯಾಗಿದ್ದಾನೆ. ಕೌಟುಂಬಿಕ ಕಲಹದಿಂದ ಮೊದಲು ಪತ್ನಿ ಲಕ್ಷ್ಮೀ ಗೆ ಸುತ್ತಿಗೆಯಿಂದ ಹಲ್ಲೆ ಮಾಡಿದ್ದಾನೆ. ಸುತ್ತಿಗೆ ಏಟು ಬಿದ್ದ ತಕ್ಷಣ ಲಕ್ಷ್ಮೀ ಮೂರ್ಛೆ ಹೋಗಿ ಕೆಳಗೆ ಬಿದ್ದಿದ್ದಾಳೆ. ಬಳಿಕ ಮಕ್ಕಳಿಗೆ ಅದೇ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಶ್ರೀಕಾಂತ್ ಪರಾರಿಯಾಗಿದ್ದಾನೆ. ತೀವ್ರ ಗಾಯಗೊಂಡ ಮಕ್ಕಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗಂಭೀರ ಗಾಯಗೊಂಡ ಲಕ್ಷ್ಮೀಯನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.