ಸುಪ್ರೀಂಕೋರ್ಟ್​ನ ಹಿರಿಯ ವಕೀಲ ಫಾಲಿ ನಾರಿಮನ್ ವಿಧಿವಶ…

42
firstsuddi

ನವದೆಹಲಿ: ಸುಪ್ರೀಂಕೋರ್ಟ್​ನ ಹಿರಿಯ ವಕೀಲ ಮಾಜಿ ಸಾಲಿಸಿಟರ್ ಜನರಲ್ ಫಾಲಿ ಎಸ್ ನಾರಿಮನ್ (95) ಅವರು ಇಂದು ಬೆಳಗ್ಗೆ ನವದೆಹಲಿಯಲ್ಲಿ ವಿಧಿವಶರಾಗಿದ್ದಾರೆ.

ನವೆಂಬರ್ 1950 ರಲ್ಲಿ ಬಾಂಬೆ ಹೈಕೋರ್ಟ್​ನ ವಕೀಲರಾಗಿ ವೃತ್ತಿ ಆರಂಭಿಸಿದ್ದ ನಾರಿಮನ್ ಅವರು 1961 ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು. ಅವರು 70 ವರ್ಷಗಳಿಗೂ ಹೆಚ್ಚು ಕಾಲ ಕಾನೂನು ಅಭ್ಯಾಸ ಮಾಡಿದ್ದಾರೆ.

1929 ರ ಜನವರಿ 10 ರಂದು ರಂಗೂನ್‌ನಲ್ಲಿ ಪಾರ್ಸಿ ಪೋಷಕರಿಗೆ ಜನಿಸಿದ ನಾರಿಮನ್, ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಮತ್ತು ಇತಿಹಾಸದಲ್ಲಿ ಬಿ.ಎ. ಮತ್ತು 1950 ರಲ್ಲಿ ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಕಲಿಕೆಯಲ್ಲಿ ಯಾವಾಗಲೂ ಮೊದಲ ಸ್ಥಾನದಲ್ಲಿದ್ದರು. 1971 ರಲ್ಲಿ ಅವರು ಸುಪ್ರೀಂ ಕೋರ್ಟ್​ನ ಹಿರಿಯ ವಕೀಲರಾಗಿ ನೇಮಕಗೊಂಡರು. ಮೇ 1972 ರಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡರು.

ಕಾವೇರಿ ಜಲವಿವಾದ ಸಂದರ್ಭದಲ್ಲಿ ಕರ್ನಾಟಕದ ಪರ ವಾದ ಮಂಡಿಸುತ್ತಿದ್ದ ಇವರಿಗೆ 1991 ರಲ್ಲಿ ಪದ್ಮಭೂಷಣ ಮತ್ತು 2007 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಕೃಷ್ಣಾ, ಕಾವೇರಿ, ಮಹದಾಯಿ ಸೇರಿದಂತೆ ಅಂತಾರಾಜ್ಯ ನದಿ ನೀರು ಹಂಚಿಕೆಯ ಎಲ್ಲ ವ್ಯಾಜ್ಯಗಳಲ್ಲಿ ರಾಜ್ಯದ ಪರ ವಾದಿಸುತ್ತಿದ್ದ ಇವರಿಗೆ ಅಂತಾರಾಷ್ಟ್ರೀಯ ಜಲತಜ್ಞರೆಂಬ ಖ್ಯಾತಿಯೂ ಬಂದಿತ್ತು.

ನಾರಿಮನ್ 1955 ರಲ್ಲಿ ಬಾಪ್ಸಿ ಎಫ್. ನಾರಿಮನ್ ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ, ಒಬ್ಬ ಮಗ ಮತ್ತು ಮಗಳು. ಅವರ ಮಗ ರೋಹಿಂಟನ್ ನಾರಿಮನ್ ಅವರು ಹಿರಿಯ ವಕೀಲರು ಮತ್ತು ಸುಪ್ರೀಂ ಕೋರ್ಟ್​ನ ನ್ಯಾಯಾಧೀಶರಾಗಿದ್ದರು. ರೋಹಿಂಟನ್ ಅವರು 2011 ರಿಂದ 2013 ರವರೆಗೆ ಭಾರತದ ಸಾಲಿಸಿಟರ್ ಜನರಲ್ ಹುದ್ದೆಯನ್ನು ಸಹ ನಿರ್ವಹಿಸಿದ್ದರು.