ಸುಪ್ರೀಂಕೋರ್ಟ್ 50ನೇ ಸಿಜೆಐ ಆಗಿ ಡಿ.ವೈ ಚಂದ್ರಚೂಡ್ ಪ್ರಮಾಣ ವಚನ ಸ್ವೀಕಾರ…

69
firstsuddi

ನವದೆಹಲಿ : ಸುಪ್ರೀಂ ಕೋರ್ಟ್ ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಡಿ.ವೈ ಚಂದ್ರಚೂಡ್ ಇಂದು ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ದ್ರೌಪದಿ ಮುರ್ಮು ಅವರು ಪ್ರಮಾಣವಚನ ಬೋಧಿಸಿದರು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಯುಯು ಲಲಿತ್ ಅವರ ಅಧಿಕಾರಾವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಇಂದು ಸಿಜೆಐ ಆಗಿ ಡಿವೈ ಚಂದ್ರಚೂಡ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮುಂದಿನ 2 ವರ್ಷಗಳ ಕಾಲ ಅಂದರೆ 2024ರ ನವೆಂಬರ್ 10ರವರೆಗೆ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ನವೆಂಬರ್ 11, 1959ರಂದು ಜನಿಸಿದ ನ್ಯಾಯಮೂರ್ತಿ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ಮತ್ತು ಬಾಂಬೆ ಹೈಕೋರ್ಟ್ ನಲ್ಲಿ ಕಾನೂನು ಅಭ್ಯಾಸ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಉದಯ್ ಉಮೇಶ್ ಲಲಿತ್ ಡಿವೈ ಚಂದ್ರಚೂಡ್ ಅವರನ್ನು ಅಕ್ಟೋಬರ್ 11ರಂದು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದರು.