ಸೂಪರ್ ಮಾರ್ಕೆಟ್​ನಲ್ಲಿ ಗಲಾಟೆ ಮಾಡಿದ್ರಾ ಕ್ರಿಕೆಟರ್ ರಾಜೇಶ್ವರಿ ಗಾಯಕ್ವಾಡ್?

84
firstsuddi

ವಿಜಯಪುರ : ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಅವರು ಸೂಪರ್ ಮಾರ್ಕೆಟ್​ನಲ್ಲಿ ಗಲಾಟೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ನಿನ್ನೆ ಸಂಜೆ ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಉಮದಿ ಸೂಪರ್ ಮಾರ್ಕೆಟ್ ಗೆ ರಾಜೇಶ್ವರಿ ಗಾಯಕ್ವಾಡ್ ಸ್ನೇಹಿತರ ಜೊತೆ ತೆರಳಿದ್ದರು. ಕಾಸ್ಮೆಟಿಕ್ ಬಾಟಲ್ ಗಳನ್ನು ತೆರೆದು ನೋಡುತ್ತಿದ್ದ ರಾಜೇಶ್ವರಿ ಅವರಿಗೆ ಅಲ್ಲಿನ ಮಹಿಳಾ ಕೆಲಸಗಾರರು ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಬಜಾರಿನ ಮಾಲೀಕ ಮಲ್ಲಿಕಾರ್ಜುನ ಕಾಸ್ಮೆಟಿಕ್ ಬಾಟಲ್ ಗಳನ್ನು ಓಪನ್ ಮಾಡದಂತೆ ರಾಜೇಶ್ವರಿ ಅವರಿಗೆ ಹೇಳಿದ್ದಾರೆ.

ಇದರಿಂದ ರಾಜೇಶ್ವರಿ ಬೆಂಬಲಿಗರು ಹಾಗೂ ಬಜಾರಿನ ಮಾಲೀಕರು, ಕೆಲಸಗಾರರ ನಡುವೆ ಮಾತಿನ ಚಕಮಕಿ ನಡೆದಿದ್ದು ಗಲಾಟೆ ನಡೆದಿದೆ ಎನ್ನಲಾಗಿದೆ. ಅಲ್ಲದೇ ಸೂಪರ್ ಮಾರ್ಕೆಟ್ ಮಾಲೀಕ ಮಲ್ಲಿಕಾರ್ಜುನ್ ಮತ್ತು ಅವರ ಪುತ್ರನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ವಿಡಿಯೋ ಸೂಪರ್ ಬಜಾರಿನಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಉಮದಿ ಸೂಪರ್ ಮಾರ್ಕೆಟ್ ಗೆ ಹೋಗಿದ್ದು ನಿಜ, ಆದ್ರೆ ಯಾವುದೇ ರೀತಿಯ ಗಲಾಟೆ ನಡೆದಿಲ್ಲ ಎಂದು ರಾಜೇಶ್ವರಿ ಗಾಯಕ್ವಾಡ್ ಸ್ಪಷ್ಟನೆ ನೀಡಿದ್ದಾರೆ.

ಇನ್ನು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯಪುರ ಎಸ್ ಪಿ ಆನಂದಕುಮಾರ್, ಕ್ರಿಯೆಟರ್ ರಾಜೇಶ್ವರಿ ಗಾಯಕ್ವಾಡ್ ಅವರು ಒಂದು ಮಾಲ್ ನಲ್ಲಿ ಗಲಾಟೆ ಮಡಿಕೊಂಡಿದ್ದಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ಆದರೆ ಘಟನೆಗೆ ಸಂಬಂಧಿಸಿದಂತೆ ಯಾವುದೇ ಕೇಸ್ ದಾಖಲಾಗಿಲ್ಲ. ದೂರು ದಾಖಲಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.