ಸ್ಪೀಕರ್ ಅನುಮತಿ ಇಲ್ಲದೇ ಡಿಕೆಶಿ ಪ್ರಕರಣ ಸ್ಯಾಂಕ್ಷನ್ ಕೊಟ್ಟಿರುವುದು ಕಾನೂನುಬಾಹಿರ: ಸಿದ್ದರಾಮಯ್ಯ.

79
firstsuddi

ಬೆಂಗಳೂರು: ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಪ್ರಕರಣ ಸಂಬಂಧ, ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ಧ ಹಿಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ಸಮ್ಮತಿ ನೀಡಿ ಆದೇಶಿಸಿತ್ತು. ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಬಿಜೆಪಿ ನೀಡಿದ್ದ ಆದೇಶವನ್ನ ವಾಪಸ್ ಪಡೆಯಲು ನಿರ್ಣಯ ಕೈಗೊಳ್ಳಲಾಗಿದೆ. ಈ ಕುರಿತಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಸಿಬಿಐ ತನಿಖೆಗೆ ಅನುಮತಿ ನೀಡಿದ್ದು ಕಾನೂನುಬಾಹಿರ ಎಂದು ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಪ್ರಕರಣ ಸ್ಯಾಂಕ್ಷನ್ ಕೊಟ್ಟಿರುವುದು ಕಾನೂನುಬಾಹಿರ. ಎಂಎಲ್ಎ ಮೇಲೆ ಸ್ಪೀಕರ್ ಅನುಮತಿ ಪಡೆದು ತನಿಖೆಗೆ ಆದೇಶ ಕೊಡಬೇಕಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿಗಳ ಮೌಖಿಕ ಆದೇಶದ ಮೇಲೆ ತನಿಖೆಗೆ ಶಿಫಾರಸು ಮಾಡಿದ್ದಾರೆ. ಕೋರ್ಟ್‌ನಲ್ಲಿರುವುದನ್ನು ನಾನು ತೀರ್ಮಾನ ಮಾಡಲ್ಲ. ಸರ್ಕಾರ ಏನು ತೀರ್ಮಾನ ಮಾಡಬೇಕೊ ಮಾಡಿದೆ. ಕೋರ್ಟ್‌ನವರು ಏನು ತೀರ್ಮಾನ ಮಾಡ್ತಾರೊ ಅದು ನಮಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಸಚಿವರಾಗಿದ್ದರೆ ರಾಜ್ಯಪಾಲರು ತನಿಖೆಗೆ ಅನುಮತಿ ಕೊಡಬೇಕು. ಶಾಸಕರಾದವರಿಗೆ ಸ್ಪೀಕರ್ ಅನುಮತಿ ಕೊಡಬೇಕು. ಡಿಕೆಶಿ 2019 ರಲ್ಲಿ ಎಂಎಲ್ಎ ಆಗಿದ್ದರು. ಹೀಗಾಗಿ ಸ್ಪೀಕರ್ ಅನುಮತಿ ಪಡೆದು ಮುಖ್ಯಮಂತ್ರಿಗಳು ತನಿಖೆಗೆ ಸೂಚನೆ ನೀಡಬೇಕಿತ್ತು. ಸ್ಪೀಕರ್ ಅನುಮತಿ ಪಡೆಯದೆ ಮುಖ್ಯಮಂತ್ರಿಗಳು ಮೌಖಿಕವಾಗಿ ಸಿಬಿಐ ತನಿಖೆಗೆ ಕೊಟ್ಟಿರುವುದು ಕಾನೂನುಬಾಹಿರ ಅಂತ ನಿರ್ಣಯ ಮಾಡಲಾಗಿದೆ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.

ನಾವು ಅಡ್ವೊಕೇಟ್ ಜನರಲ್ (ಎಜಿ) ಅವರ ಅಭಿಪ್ರಾಯ ಕೇಳಿದೆವು. ಅವರು ಆದೇಶ ಹಿಂಪಡೆಯಬಹುದು ಅಂತ ಹೇಳಿದರು. ಅದರಂತೆ ಸಂಪುಟ ಸಭೆಯಲ್ಲಿ ಹಿಂಪಡೆದಿದ್ದೇವೆ. ಕುಮಾರಸ್ವಾಮಿ ಆರೋಪಕ್ಕೆ ನಾವು ತಲೆ ಕೆಡಿಸಿಕೊಂಡಿಲ್ಲ. ಕುಮಾರಸ್ವಾಮಿ ಏನು ಅಡ್ವೊಕೇಟ್ ಜನರಲ್? ರಾಜಕೀಯ ಪ್ರೇರಿತ ಆರೋಪ ಮಾಡ್ತಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ.