ಬೆಂಗಳೂರು: ಬಾಂಬ್ ಸ್ಫೋಟ ಸಂಭವಿಸಿದ ನಂತರ ಒಂದು ವಾರದ ಬಳಿಕ ಇದೀಗ ನಗರದ ರಾಮೇಶ್ವರಂ ಕೆಫೆ ರೀ ಓಪನ್ ಆಗುತ್ತಿದೆ.
ಶಿವರಾತ್ರಿ ದಿನವೇ ಕೆಫೆ ಪುನರಾರಂಭ ಮಾಡುವುದಾಗಿ ಮ್ಯಾನೇಜ್ಮೆಂಟ್ ಈಗಾಗಲೇ ತಿಳಿಸಿತ್ತು. ಅದರಂತೆ ಇಂದು ಬೆಳಗ್ಗೆಯೇ ಕೆಫೆ ಪುನರಾರಂಭ ಮಾಡಿದೆ. ಕೆಫೆಯಲ್ಲಿ ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ನೆರವೇರಿದವು. ಆ ಮೂಲಕ ಮತ್ತೆ ಗ್ರಾಹಕರಿಗೆ ಕೆಫೆ ಮುಕ್ತವಾಗಿದೆ.
ಮಾಲೀಕರು ಈಗಾಗಲೇ ಕೆಫೆಯನ್ನು ಆಲ್ಟ್ರೇಷನ್ ಮಾಡಿಸಿದ್ದಾರೆ. ಕೆಫೆಯ ಪ್ರವೇಶ ದ್ವಾರದಲ್ಲಿ ಎರಡು ಮೆಟಲ್ ಡಿಟೆಕ್ಟರ್ ಅಳವಡಿಕೆ ಸಿಸ್ಟಮ್ ಅಳವಡಿಸಲಾಗಿದೆ. ಪ್ರತಿಯೊಬ್ಬ ಗ್ರಾಹಕರನ್ನು ಹ್ಯಾಂಡ್ ಡಿಟೆಕ್ಟರ್ ಮೂಲಕ ಪರೀಕ್ಷಿಸಿ ಸಿಬ್ಬಂದಿ ಪ್ರವೇಶಕ್ಕೆ ಅನುವು ಮಾಡಿಕೊಡಲಿದ್ದಾರೆ. ಬಾಂಬ್ ಸ್ಫೋಟ ಪ್ರಕರಣದಿಂದ ಎಚ್ಚೆತ್ತು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.
ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಶುಕ್ರವಾರ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಐದು ಮಂದಿ ಗಾಯಗೊಂಡಿದ್ದರು. ಬಾಂಬ್ ಇಟ್ಟು ಹೋಗಿದ್ದ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಘಟನೆ ಸಂಬಂಧ ತನಿಖೆಯೂ ಪ್ರಗತಿಯಲ್ಲಿದೆ.
ಈ ಮಧ್ಯೆ, ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಚುರೂಪಿಸಿದ ಅನುಮಾನದ ಮೇಲೆ ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಶಂಕಿತ ಉಗ್ರ ಮಿನಾಜ್ ಅಲಿಯಾಸ್ ಸುಲೇಮಾನ್ನನ್ನು ಎನ್ಐಎ ಪೊಲೀಸರು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಈತ ಜೈಲಿನಲ್ಲೇ ಕುಳಿತುಕೊಂಡು ಸಂಚು ಹೂಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.










