ಉತ್ತರ ಕನ್ನಡ: ಹಣದ ವಿಚಾರಕ್ಕೆ ವ್ಯಕ್ತಿಯೋರ್ವ, ಆಟೋ ಚಾಲಕನ ಮೇಲೆ ಟಿಪ್ಪರ್ ಹರಿಸಿ ಕೊಲೆ ಮಾಡಿರುವ ಘಟನೆ ನಿನ್ನೆ ತಡರಾತ್ರಿ ಜಿಲ್ಲೆಯ ಹೊನ್ನಾವರ ತಾಲೂಕಿನ ಅರೇ ಅಂಗಡಿಯ ಜನತಾ ಕಾಲೋನಿ ಸಮೀಪ ನಡೆದಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತನನ್ನು ಓಲ್ವಿನ್ ಲೋಬೋ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಕೇಶವ ನಾಯ್ಕ ಹಾಗೂ ವಸಂತ ನಾಯ್ಕ ಎಂದು ಗುರುತಿಸಲಾಗಿದೆ. ವಿನಾಯಕ ನಾರಾಯಣ ಭಟ್ ಎಂಬಾತ ಈ ಕೃತ್ಯ ಎಸಗಿದ್ದು, ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕೇಶವ ನಾಯ್ಕನ ಜೊತೆ ಜಗಳವಾಡಿದ್ದ ಎಂದು ತಿಳಿದು ಬಂದಿದೆ.
ನಿನ್ನೆ ತಡರಾತ್ರಿ ಅರೇಅಂಗಡಿಯ ಜನತಾ ಕಾಲೋನಿ ಸಮೀಪ ವಸಂತ ನಾಯ್ಕ, ಜನಾರ್ಧನ ನಾಯ್ಕ ಹಾಗೂ ಆಟೋ ಚಾಲಕ ಓಲ್ವಿನ್ ರವಿ ಲೋಬೋ ಮಾತನಾಡುತ್ತಾ ನಿಂತುಕೊಂಡಿದ್ದರು. ಈ ವೇಳೆ ಕೊಲೆ ಮಾಡುವ ಉದ್ದೇಶದಿಂದ ಅರೇಅಂಗಡಿ ಕಡೆಯಿಂದ ಕೆಂಪು ಬಣ್ಣದ ಟಿಪ್ಪರ್ ಲಾರಿ ಚಲಾಯಿಸಿಕೊಂಡು ಬಂದಿದ್ದ ಆರೋಪಿ ವಿನಾಯಕ ಭಟ್, ಮೂವರ ಮೇಲೂ ಟಿಪ್ಪರ್ ಹಾಯಿಸಿದ್ದಾನೆ. ಈ ವೇಳೆ ಓಲ್ವಿನ್ ರವಿ ಲೋಬೋ ಅವರ ತಲೆಗೆ, ಬಲಗಾಲಿಗೆ ಗಂಭೀರ ಗಾಯವಾಗಿದ್ದು ಕೊನೆಯುಸಿರೆಳೆದಿದ್ದಾರೆ.
ಇನ್ನುಳಿದಂತೆ ವಸಂತ ನಾಯ್ಕ ಹಾಗೂ ಜನಾರ್ಧನ ನಾಯ್ಕ ಅವರಿಗೂ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಬಳಿಕ ಆರೋಪಿ ವಿನಾಯಕ ಭಟ್ ತಲೆ ಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










