ಮಾಸ್ಕೋ : ರಷ್ಯಾದಲ್ಲಿ ಕೋವಿಡ್ ಮತ್ತು ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮ ಜನಸಂಖ್ಯಾ ಕೊರತೆ ಉಂಟಾಗುತ್ತಿದ್ದು, ಅದನ್ನು ಸರಿದೂಗಿಸಲು 10 ಅಥವಾ ಹೆಚ್ಚಿನ ಮಕ್ಕಳನ್ನು ಹೆರುವ ಮಹಿಳೆಯರಿಗೆ ಹಣವನ್ನು ನೀಡುವುದಾಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಣೆ ಮಾಡಿದ್ದಾರೆ.
ಈ ವರ್ಷದ ಮಾರ್ಚ್ ನಿಂದ ರಷ್ಯಾದಲ್ಲಿ ಅತ್ಯಧಿಕ ದೈನಂದಿನ ಕೊರೊನಾ ವೈರಸ್ ಪ್ರಕರಣ ವರದಿಯಾಗುತ್ತಿದೆ. ಜತೆಗೆ ಉಕ್ರೇನ್ ಜತೆಗಿನ ಯುದ್ಧದಲ್ಲಿ ರಷ್ಯಾದ ಸುಮಾರು 50,000 ಮಂದಿ ಸೈನಿಕರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.
10 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದರೆ ಅಂತಹ ಮಹಿಳೆಯರಿಗೆ ಒಂದು ಬಾರಿಗೆ 13,500 ಪೌಂಡ್ (ಸುಮಾರು 13 ಲಕ್ಷ ರೂ) ಹಣ ನೀಡುವುದು ಈ ಘೋಷಣೆಯಲ್ಲಿ ಒಳಗೊಂಡಿದೆ. ಇದು ದೇಶದ ಜನಸಂಖ್ಯೆಯನ್ನು ಹೆಚ್ಚಿಸಲು ಪುಟಿನ್ ಅವರು ಮಾಡಿರುವ ಹತಾಶೆಯ ಪ್ರಯತ್ನ ಎಂದು ವಿಶ್ಲೇಷಕರು ಹೇಳಿದ್ದಾರೆ.
ಸಾಂಕ್ರಾಮಿಕ ರೋಗ ಹಾಗೂ ಯುದ್ಧದ ಪರಿಣಾಮ ರಷ್ಯಾದಲ್ಲಿ ಜನಸಂಖ್ಯೆ ಕ್ಷೀಣಿಸಿದೆ. ಈ ಹಿನ್ನೆಲೆಯಲ್ಲಿ ಪುಟಿನ್, ‘ಮದರ್ ಹೀರೋಯಿನ್’ ಎಂಬ ಯೋಜನೆಯಡಿ ಈ ಗಿಫ್ಟ್ ಮಹಿಳೆಯರಿಗೆ ನೀಡುವ ಕುರಿತು ಘೋಷಣೆ ಮಾಡಿದ್ದಾರೆ ಎಂದು ರಷ್ಯಾದ ರಾಜಕೀಯ ಮತ್ತು ಭದ್ರತಾ ತಜ್ಞ ಡಾ. ಜೆನ್ನಿ ಮಾಥರ್ಸ್ ತಿಳಿಸಿದ್ದಾರೆ.
ದೊಡ್ಡ ಕುಟುಂಬಗಳನ್ನು ಹೊಂದಿರುವ ಜನರು ಹೆಚ್ಚು ದೇಶಭಕ್ತಿ ಹೊಂದಿರುತ್ತಾರೆ ಎಂದು ಡಾ. ಮಾಥರ್ಸ್ ಹೇಳಿದ್ದಾರೆ. ಆದರೆ ಈ ಯೋಜನೆಯ ನಿಯಮವೊಂದು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಹತ್ತು ಮಕ್ಕಳು ಜನಿಸಿದಾಗ, ಅದರಲ್ಲಿನ ಎಲ್ಲ ಮಕ್ಕಳೂ ಜೀವಂತ ಇರಬೇಕು ಎನ್ನುವುದು ಪುಟಿನ್ ಅವರ ನಿಯಮವಾಗಿದೆ.
ಆದೇಶದ ಪ್ರಕಾರ, ಅವರ ಹತ್ತನೇ ಮಗು ಒಂದು ವರ್ಷದ ಜನ್ಮದಿನ ಆಚರಿಸುವವರೆಗೆ ಬೆಳೆದ ಬಳಿಕ ಮತ್ತು ಆಗ ಇತರೆ ಎಲ್ಲ ಒಂಬತ್ತು ಮಕ್ಕಳು ಜೀವಂತ ಇದ್ದಾಗ 1 ಬಿಲಿಯನ್ ರುಬೆಲ್ ಅಥವಾ 13,500 ಪೌಂಡ್ ಹಣ ಮಹಿಳೆಗೆ ಸಿಗುತ್ತದೆ ಎಂದು ಹೇಳಲಾಗಿದೆ.










