ಮಾಜಿ ಸಿಎಂ ಸಿದ್ದರಾಮಯ್ಯಗೆ ಘೇರಾವ್ – ಗೋ ಬ್ಯಾಕ್ ಸಿದ್ದು ಖಾನ್ ಎಂದು ಘೋಷಣೆ…

56
firstsuddi

ಮಡಿಕೇರಿ : ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಇಂದು ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಿದ್ದರಾಮಯ್ಯನವರಿಗೆ ಘೇರಾವ್ ಹಾಕಿ ದಿಕ್ಕಾರ ಕೂಗಿದರು.

ಪೊನ್ನಂಪೇಟೆ ತಾಲೂಕಿನ ತಿತಿಮತಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಪ್ರತಿಭಟಿಸಿದರು. ಸಿದ್ದರಾಮಯ್ಯ ಅವರಿದ್ದ ಕಾರನ್ನು ಅಡ್ಡಗಟ್ಟಿ ಸಾವರ್ಕರ್ ಭಾವಚಿತ್ರವನ್ನು ಕಾರಿನೊಳಗೆ ಹಾಕಿದಲ್ಲದೇ ಕಪ್ಪು ಬಾವುಟ ಪ್ರದರ್ಶಿಸಿ `ಗೋ ಬ್ಯಾಕ್ ಸಿದ್ದುಖಾನ್, ಗೋ ಬ್ಯಾಕ್ ಸಿದ್ದರಾಮಯ್ಯ’ ಎಂದು ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ದರ್ಶನ್ ಜೋಯಪ್ಪ, ರಾಜ್ಯದಲ್ಲಿ ಮತಾಂಧ ಟಿಪ್ಪುವಿನ ಜಯಂತಿ ಆಚರಣೆ ಜಾರಿಗೆ ತಂದು ಅಮಾಯಕರ ಕೊಲೆಗೆ ಕಾರಣರಾದ ಟಿಪ್ಪು ಭಕ್ತ ಸಿದ್ದರಾಮಯ್ಯ ಕೊಡಗಿಗೆ ಕಾಲಿಡುವುದರಿಂದ ಕೊಡಗಿನ ಶಾಂತಿ ಭಂಗವಾಗಲಿದೆ. ಅಷ್ಟೇ ಅಲ್ಲದೇ ಕೊಡವರನ್ನು ಗೋಮಾಂಸ ಭಕ್ಷಕರೆಂದು ಬಿಂಬಿಸಿದ್ದಾರೆ. ಹಿಂದೂ ವಿರೋಧಿ ಸಿದ್ದರಾಮಯ್ಯ ಕೊಡಗಿಗೆ ಕಾಲಿಡಲು ಅಯೋಗ್ಯರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ಬಂದೋಬಸ್ತ್ ಮಾಡಿ ಪ್ರತಿಭಟನಾಕಾರರನ್ನು ಚದುರಿಸಿ ಸಿದ್ದರಾಮಯ್ಯರ ವಾಹನ ಮುಂದೆ ಚಲಿಸಲು ಅನುವುಮಾಡಿಕೊಟ್ಟರು.