ಹಳೆ ನಾಣ್ಯ ಖರೀದಿಸುವುದಾಗಿ ಜಾಹೀರಾತು, ನಂಬಿಸಿ ವಂಚನೆ.

27

ಮಂಗಳೂರು: ಹಳೆಯ ನಾಣ್ಯಗಳ ಖರೀದಿಸುವುದಾಗಿ ಮಂಗಳೂರಿನ ವ್ಯಕ್ತಿಯೊಬ್ಬರಿಗೆ 58 ಲಕ್ಷ ರೂಪಾಯಿ ವಂಚಿಸಿದ ಘಟನೆ ನಡೆದಿದ್ದು, ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ವ್ಯಕ್ತಿ 2024ರ ನ.25ರಂದು ಫೇಸ್‍ಬುಕ್ ನೋಡುತ್ತಿರುವಾಗ ಹಳೆಯ ನ್ಯಾಣ್ಯಗಳನ್ನು ಖರೀದಿಸಿ ಹೆಚ್ಚಿನ ಹಣ ನೀಡುವುದಾಗಿ ತಿಳಿಸಿರುವ ಜಾಹಿರಾತನ್ನು ನೋಡಿದ್ದಾರೆ. ನಂತರ ಆ ಜಾಹಿರಾತಿನಲ್ಲಿದ್ದ ವಾಟ್ಸ್‍ಆ್ಯಪ್ ಖಾತೆಗೆ ತಮ್ಮ ಬಳಿ ಇದ್ದ 15 ಹಳೆಯ ನ್ಯಾಣ್ಯಗಳ ಫೋಟೋಗಳನ್ನು ಕಳುಹಿಸಿದ್ದರು. ಅದರಂತೆ, ಆ ಕಡೆಯಿಂದ 15 ಹಳೆಯ ನ್ಯಾಣ್ಯಗಳನ್ನು ಖರೀದಿಸಿ, ಅದಕ್ಕೆ ಪ್ರತಿಯಾಗಿ 49 ಲಕ್ಷ ರೂಪಾಯಿ ಹಣ ನೀಡುವುದಾಗಿ ಆರೋಪಿ ತಿಳಿಸಿದ್ದ ಎಂದು ವಂಚನೆಗೊಳಗಾದವರು ದೂರಿನಲ್ಲಿ ಹೇಳಿದ್ದಾರೆ. ನಂತರ ನಾಣ್ಯ ಮಾರಲು ಇಷ್ಟವಿದ್ದರೆ ಮೊದಲಿಗೆ ಆರ್‍ಬಿಐ ನೋಂದಣಿ ಮಾಡಲು 750 ರೂಪಾಯಿ ಹಣ ಪಾವತಿಸುವಂತೆ ಆರೋಪಿ ತಿಳಿಸಿದ್ದು, ವ್ಯಕ್ತಿಯು ಯುಪಿಐ ಮೂಲಕ ಪಾವತಿಸಿದ್ದರು. ಆ ನಂತರ ಜಿಎಸ್‍ಟಿ ಪ್ರೊಸಿಡಿಂಗ್ ಡಾಟಾ ಶುಲ್ಕ, ಜಿಪಿಎಸ್ ಶುಲ್ಕ, ಟಿಡಿಎಸ್ ಮೊತ್ತದ ಶುಲ್ಕ, ಇನ್ಶೂರೆನ್ಸ್ ಶುಲ್ಕ, ಐಟಿಆರ್ ಶುಲ್ಕ ಹಾಗೂ ಆರ್‍ಬಿಐ ನೋಟಿಸ್ ಪೆಂಡಿಂಗ್ ಶುಲ್ಕವಿದೆ ಎಂದು ಹಣ ಪಾವತಿಸುವಂತೆ ಆರೋಪಿಯು ವಾಟ್ಸ್‍ಆ್ಯಪ್ ನಂಬರ್‍ಗೆ ಸಂದೇಶ ಕಳಿಸಿದ್ದಾನೆ. ಆತ ತಿಳಿಸಿದಂತೆ ತಾವು ಹಣವನ್ನು ವರ್ಗಾವಣೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಬಳಿಕ, 2024ರ ಡಿ.15ರಂದು ತಮ್ಮ ಮೊಬೈಲ್ ನಂಬರ್‍ಗೆ ಕರೆಯೊಂದು ಬಂದಿದ್ದು, ಆ ಕಡೆಯಿಂದ ವ್ಯಕ್ತಿ ತನ್ನನ್ನು ಮುಂಬೈ ಸೈಬರ್ ಪೊಲೀಸ್ ಆಯುಕ್ತ ಗೌರವ್ ಶಿವಾಜಿ ರಾವ್ ಶಿಂದೆ ಎಂಬುದಾಗಿ ಪರಿಚಯಿಸಿಕೊಂಡ. ಆರ್‍ಬಿಐ ಕಡೆಯಿಂದ ನೋಟಿಸ್ ಬಂದಿದ್ದು, ನಿಮ್ಮನ್ನು ಬಂಧಿಸುತ್ತೇವೆ. ಆದ್ದರಿಂದ ಆರ್‌ಬಿಐ ಗೈಡ್‍ಲೈನ್ಸ್ ಪ್ರಕಾರ 12,55,000 ರೂಪಾಯಿ ಹಣ ಪಾವತಿಸಬೇಕು. ನಂತರ ನಾವು ಚೆಕ್ ಮಾಡಿ, ಒಂದು ಗಂಟೆಯೊಳಗೆ ನಿಮ್ಮ ಖಾತೆಗೆ ಎಲ್ಲ ಹಣವನ್ನು ವರ್ಗಾಯಿಸುತ್ತೇವೆ ಎಂದು ನಂಬಿಸಿದ್ದಾನೆ ಎಂದು ತಿಳಿಸಲಾಗಿದೆ. ತಮಗೆ ಮೋಸ ಮಾಡಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ಮನವಿ ಮಾಡಿಕೊಂಡಿದ್ದಾರೆ.