ಹಾಲಿಗೆ ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹಿಸಿ ಗೋವುಗಳೊಂದಿಗೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ…

55
firstsuddi

ಬೆಂಗಳೂರು: ಹಾಲಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಹಸುಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದರು.

ಇಂದು ತಮ್ಮ ಗೋವುಗಳೊಂದಿಗೆ ನಗರದ ಫ್ರೀಡಂ ಪಾರ್ಕ್ ಗೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಅನ್ನದಾತರಿಗೆ ಟೋಪಿ ಹಾಕಿರುವ ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು.

ರಾಜ್ಯದ ಕಾಂಗ್ರೆಸ್‌ ಸರ್ಕಾರ ಕೇವಲ ಜನತೆಗೆ ಮಾತ್ರವಲ್ಲ, ಜಾನುವಾರುಗಳಿಗೂ ಶಾಕ್‌ ನೀಡುತ್ತದೆ. ಹಾಲು ಉತ್ಪಾದಕರಿಗೆ ಸಬ್ಸಿಡಿ ಹೆಚ್ಚಳ, ಹಸು-ಎಮ್ಮೆ ಖರೀದಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಎಂಬಿತ್ಯಾದಿ ಕಲರ್‌ ಕಲರ್‌ ಹೂವುಗಳನ್ನು ಕಿವಿ ಮೇಲೆ ಇಟ್ಟು ಅಧಿಕಾರಕ್ಕೆ ಬಂದು, ಈಗ ಸಾಲವನ್ನು ನೀಡುತ್ತಿಲ್ಲ, ಸಬ್ಸಿಡಿಯನ್ನೂ ಹೆಚ್ಚಿಸುತ್ತಿಲ್ಲ ಎಂದು ಬಿಜೆಪಿ ನಾಯಕರು ಕಿಡಿಕಾರಿದರು.

ಈಗ ರೈತರಿಗೆ ಹಾಲಿನ ಸಬ್ಸಿಡಿಯಾಗಿ 716 ಕೋಟಿ ರೂಪಾಯಿ ನೀಡಬೇಕಿದ್ದು, ಆ ಬಾಕಿ ಹಣವನ್ನೂ ನೀಡದೆ ಹಾಗೇ ಉಳಿಸಿಕೊಂಡಿದೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಇದರ ಪರಿಣಾಮ ರಾಜ್ಯದಲ್ಲಿ ಹಾಲಿನ ಉತ್ಪಾದನೆಯು ಭಾರಿ ಪ್ರಮಾಣದಲ್ಲಿ ಕುಂಠಿತವಾಗಿದೆ. ಜನತೆಯ ಜತೆ ಜಾನುವಾರುಗಳ ಶಾಪವೂ ಸಹ ಸಿಎಂ ಸಿದ್ದರಾಮಯ್ಯ ಅವರಿಗೆ ತಟ್ಟುತ್ತದೆ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದರು.

ಬಿಜೆಪಿ ಪ್ರತಿಭಟನೆಯಲ್ಲಿ ಹಸುಗಳನ್ನು ಕರೆತಂದಿದ್ದಕ್ಕೆ ಮಾನವ ಹಕ್ಕುಗಳ ರಕ್ಷಣೆ ಜನ ಸೇವಾ ಸಮಿತಿ ಕಡೆಯಿಂದ ಮೂವರು ವ್ಯಕ್ತಿಗಳು ಆಕ್ಷೇಪಿಸಿದರು. ಹಸುಗಳನ್ನು ಕರೆತಂದಿದ್ದ ಪ್ರತಿಭಟನಾನಿರತ ರೈತರ ಬಳಿ ತೆರಳಿ ಪ್ರತಿಭಟಿಸಿದರು. ಪ್ರತಿಭಟನೆಗೆ ಹಸುಗಳನ್ನು ತಂದಿದ್ದು ಸರಿಯಲ್ಲ. ಹಸುಗಳ ಬಳಕೆ ನಿಷಿದ್ಧ ಎಂದರು. ಈ ವೇಳೆ, ಸಮಿತಿ ಸದಸ್ಯರ ವರ್ತನೆಯಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಸಮಿತಿ ಸದಸ್ಯರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಸಮಿತಿ ಸದಸ್ಯರ ನಡೆಗೆ ಸಿಟ್ಟಾಗಿ ಸ್ಥಳದಿಂದ ಓಡಿಸಲು ಮುಂದಾದರು. ಈ ವೇಳೆ ನೂಕಾಟ, ತಳ್ಳಾಟ ನಡೆದು ಮಾತಿನ ಚಕಮಕಿ ನಡೆಯಿತು. ನಂತರ ಸಮಿತಿ ಸದಸ್ಯರ ವಿರುದ್ಧ ಧಿಕ್ಕಾರ ಕೂಗಿ ಹೊರಗೆ ಕಳುಹಿಸಿದರು. ಬಳಿಕ ಹಸುಗಳೊಂದಿಗೆ ವಿಧಾನಸೌಧ ಮುತ್ತಿಗೆ ಯತ್ನಕ್ಕೆ ಬಿಜೆಪಿ ಕಾರ್ಯಕರ್ತರು ಮುಂದಾದರು. ಈ ವೇಳೆ, ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರು ಮತ್ತು ರೈತರನ್ನು ಪೊಲೀಸರು ವಶಕ್ಕೆ ಪಡೆದು ಸ್ಥಳದಿಂದ ಬೇರೆಡೆಗೆ ಕರೆದೊಯ್ದರು.