ಹಾಸನದಲ್ಲಿ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಪತ್ತೆ…

135
firstsuddi

ಹಾಸನ: ಶಾಲೆ ಮುಗಿದ ನಂತರ ನಾಪತ್ತೆಯಾಗಿದ್ದ ಏಳನೇ ತರಗತಿ ವಿದ್ಯಾರ್ಥಿನಿ ನಂದಿತಾ ಇದೀಗ ತುಮಕೂರಿನಲ್ಲಿ ಪತ್ತೆಯಾಗಿದ್ದಾಳೆ.

ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಅಣತಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ನಂದಿತಾ, ಸರ್ಕಾರಿ ಹಾಸ್ಟೆಲ್ ನಲ್ಲಿದ್ದಳು. ಮೂಲತಃ ಕೆ.ಆರ್.ಪೇಟೆ ತಾಲೂಕಿನ ನಂಜೇಗೌಡ ಮಂಗಳ ದಂಪತಿ ಪುತ್ರಿ ನಂದಿತಾಳನ್ನು ತಾತ ಚನ್ನರಾಯಪಟ್ಟಣ ದಾಸರಹಳ್ಳಿ ಗ್ರಾಮದ ಕುಮಾರ್ ಸಾಕಿಕೊಂಡು ವಿದ್ಯಾಭ್ಯಾಸ ಕೊಡಿಸುತ್ತಿದ್ದರು.

ನವೆಂಬರ್ 7 ಸೋಮವಾರದಂದು ಶಾಲೆಗೆ ಬಂದಿದ್ದ ನಂದಿತಾ ಸಂಜೆಯವರೆಗೂ ಶಾಲೆ ಮುಗಿಸಿ ವಾಪಸ್ ಹೋಗಿದ್ದಾಳೆ. ಶಿಕ್ಷಕರು ವಿದ್ಯಾರ್ಥಿಗಳೆಲ್ಲಾ ಹೋದ ಕೆಲಹೊತ್ತಿನಲ್ಲೇ ವಾಪಸ್ ಶಾಲೆಗೆ ಬಂದಿರುವ ನಂದಿತಾ ಶಾಲಾ ಆವರಣದಲ್ಲಿ ಬ್ಯಾಗ್ ಇಟ್ಟು ದಿಢೀರ್ ಕಾಣೆಯಾಗಿದ್ದಳು. ಈ ಸಂಬಂಧ ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಶಾಲೆ ಮುಗಿದ ಬಳಿಕ ನಂದಿತಾ ಕಾರೆಹಳ್ಳಿಗೆ ಆಟೋದಲ್ಲಿ ಹೋಗಿ ತಿಪಟೂರಿಗೆ ಬಸ್ ಹತ್ತಿದ್ದಾಳೆ. ಈ ಬಸ್ ನಲ್ಲಿ ಮಹಿಳೆಯೊಬ್ಬರ ಪರಿಚಯವಾಗಿದ್ದು, ಈ ವೇಳೆ ನಂದಿತಾ, ತನಗೆ ತಂದೆ ತಾಯಿ ಇಲ್ಲ ಎಂದು ಕಣ್ಣೀರಿಡುತ್ತಾ ನೋವು ಹೇಳಿಕೊಂಡಿದ್ದಾಳೆ. ಹೀಗಾಗಿ ಆ ಮಹಿಳೆ ನಂದಿತಾಳನ್ನು ತಮ್ಮ ಮನೆಗೆ ಕರೆದೊಯ್ದಿದ್ದರು. ಆದರೆ ನಿನ್ನೆ ತುಮಕೂರಿನಲ್ಲಿ ಮಹಿಳೆ ಜೊತೆ ದೇವಸ್ಥಾನಕ್ಕೆ ತೆರಳಿದ್ದ ನಂದಿತಾಳನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ತುಮಕೂರಿಗೆ ತೆರಳಿ ಬಾಲಕಿಯನ್ನು ಪೊಲೀಸರು ಕರೆತಂದಿದ್ದಾರೆ.