ಹಾಸನ : ಪತಿ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನದಿಂದ ಪತ್ನಿಯೇ ತನ್ನ ಪತಿಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಬೇಲೂರು ತಾಲ್ಲೂಕಿನ ವಾಗಿನಕೆರೆಕಲ್ಲ ಹಳ್ಳಿಯಲ್ಲಿ ನಡೆದಿದೆ. ಚಂದ್ರೇಗೌಡ(52) ಕೊಲೆಯಾದ ಪತಿ ಎಂದು ಗುರುತಿಸಲಾಗಿದ್ದು, ಇಂದ್ರಮ್ಮ ಪತಿಯನ್ನೇ ಕೊಲೆಗೈದ ಪತ್ನಿ ಎಂದು ಗುರುತಿಸಲಾಗಿದೆ. ಮೃತ ಚಂದ್ರೇಗೌಡ ಅವರು ಮನೆಗೆ ಬಾರದೆ ಹೆಚ್ಚು ಸಮಯ ಹೊರಗೆ ಇರುತ್ತಿದ್ದರು ಎನ್ನಲಾಗಿದ್ದು, ಇದರಿಂದ ಪತಿಗೆ ಅನೈತಿಕ ಸಂಬಂಧ ಇದೆ ಎಂದು ತಿಳಿದು ಪತ್ನಿ ಇಂದ್ರಮ್ಮ ಪ್ರತಿದಿನ ಚಂದ್ರೇಗೌಡ ಅವರ ಬಳಿ ಜಗಳ ಮಾಡುತ್ತಿದ್ದರು. ಎಂದಿನಂತೆ ಮಂಗಳವಾರ ರಾತ್ರಿಯೂ ಕೂಡಾ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ಪತ್ನಿ ಇಂದ್ರಮ್ಮ ಮಚ್ಚಿನಿಂದ ಚಂದ್ರೇಗೌಡ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಚಂದ್ರೇಗೌಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡ ಬೇಲೂರು ಠಾಣಾ ಪೊಲೀಸರು ಆರೋಪಿ ಪತ್ನಿ ಇಂದ್ರಮ್ಮ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.










