ಹಾಸನ : ಮುಂದಿನ ದಿನಗಳಲ್ಲಿ ಜೆಡಿಎಸ್ ನ 12 ರಿಂದ 15 ಶಾಸಕರು ಬಿಜೆಪಿಗೆ ಸೇರಲಿದ್ದಾರೆ ಎಂದು ಮಾಜಿ ಸಚಿವ ಎ. ಮಂಜು ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಹಾಸನಾಂಭೆಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಜೆಡಿಎಸ್ ನ 12 ರಿಂದ 15 ಜನ ಶಾಸಕರು ಬಿಜೆಪಿಗೆ ಸೇರಲಿದ್ದಾರೆ. ಹೀಗಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಬಿಜೆಪಿ ಜೊತೆ ಸಖ್ಯ ಮಾಡಲು ಹೊರಟಿದ್ದಾರೆ. ಕುಮಾರಸ್ವಾಮಿ ಅವರು ಈ ಹಿಂದೆ ಹೇಳಿದಂತೆ ರಾಜಕೀಯ ನಿವೃತ್ತಿ ಪಡೆದುಕೊಳ್ಳುವುದು ಒಳ್ಳೆಯದು. ನಿವೃತ್ತಿಯಾಗಲು ಇದು ಸೂಕ್ತ ಸಮಯ. ಒಂದು ತಿಂಗಳ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಸರ್ದಾರ್ ವಲ್ಲಭ ಭಾಯ್ ಪ್ರತಿಮೆ ಎದುರು ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗಾಗಿ ಬಿಜೆಪಿ ನಾಯಕರು ಎಚ್ಚರಿಕೆಯಿಂದ ಇರಬೇಕು ಎಂದರು. ನಾನು ಕಾಂಗ್ರೆಸ್ ನಲ್ಲಿದ್ದಾಗ ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಬೇಡಿ ಎಂದು ಸಿದ್ದರಾಮಯ್ಯ ಅವರಿಗೆ ಹೇಳಿದ್ದೆ. ಆಗ ನನ್ನ ಮಾತು ಕೇಳಲಿಲ್ಲ. ಈಗಾ ಜೆಡಿಎಸ್ ಕುರಿತು ಅವರಿಗೆ ಅರಿವಾಗಿದೆ. ನಾನು ಹೇಳಿದಂತೆಯೇ ಮೈತ್ರಿ ಸರ್ಕಾರ ಹೆಚ್ಚು ದಿನ ಉಳಿಯಲಿಲ್ಲ. ನಮ್ಮ ಬಿಜೆಪಿಯರು ಹುಷಾರಾಗಿರಬೇಕು. ಅಧಿಕಾರಕ್ಕಾಗಿ ಜೆಡಿಎಸ್ ನವರು ಯಾರ ಜೊತೆ ಬೇಕಾದರೂ ಸಖ್ಯ ಬೆಳೆಸುತ್ತಾರೆ ಎಂದರು.










