ಹಾಸನ : ಹೊರಗೆ ಸುತ್ತಾಡಲೆಂದು ಹೋಗಿದ್ದ ನವದಂಪತಿ ಹೇಮಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆನ್ನಲಿ ಗ್ರಾಮದ ಸಮೀಪ ನಡೆದಿದೆ. ಬೇಲೂರು ತಾಲ್ಲೂಕಿನ ಮುರಹಳ್ಳಿ ಗ್ರಾಮದ ನಿವಾಸಿ ಅರ್ಥೇಶ್(27) ಹಾಗೂ ಹೆನ್ನೆಲಿ ಗ್ರಾಮದ ನಿವಾಸಿ ಕೃತಿಕಾ(23) ಮೃತ ದಂಪತಿ ಎಂದು ಗುರುತಿಸಲಾಗಿದ್ದು, ಇವರಿಬ್ಬರು ಕಳೆದ 2 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದು, ಅರ್ಥೇಶ್ ಅವರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಲಾಕ್ಡೌನ್ ಆಗಿರುವುದರಿಂದ ತಮ್ಮ ಸ್ವಗ್ರಾಮವಾದ ಮುರಹಳ್ಳಿ ಗ್ರಾಮಕ್ಕೆ ಆಗಮಿಸಿದ್ದರು. ಬಳಿಕ ಬುಧವಾರ ಹೆನ್ನೆಲಿ ಗ್ರಾಮದಲ್ಲಿರುವ ತನ್ನ ಪತ್ನಿಯ ನಿವಾಸಕ್ಕೆ ತೆರಳಿದ್ದು, ಬಳಿಕ ಇಬ್ಬರು ಬೈಕ್ನಲ್ಲಿ ಹೊರಗೆ ಸುತ್ತಾಡಲೆಂದು ಹೋಗಿದ್ದರು. ಹೋಗಿ ಬಹಳ ಸಮಯ ಕಳೆದರೂ ಮನೆಗೆ ಬಾರದ ಕಾರಣ ಮನೆಯವರು ಇಬ್ಬರ ಮೊಬೈಲ್ಗೆ ಕರೆ ಮಾಡಿದ್ದಾರೆ. ಆದರೆ ಎರಡು ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಭಯಗೊಂಡು ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಹೇಮಾವತಿ ನದಿ ಸಮೀಪದ ಬೈಕ್ ಇರುವುದು ಕಂಡುಬಂದಿದ್ದು, ಬಳಿಕ ಮೀನುಗಾರರ ಸಹಾಯದಿಂದ ನದಿಯಲ್ಲಿ ಶೋಧಕಾರ್ಯ ನಡೆಸಿದ್ದಾರೆ. ಈ ವೇಳೆ ಕೃತಿಕಾ ಅವರ ಮೃತದೇಹ ಮೀನುಗಾರರ ಬಲೆಗೆ ಸಿಕ್ಕಿದ್ದು, ಬಳಿಕ ಅರ್ಥೇಶ್ ಅವರ ಮೃತದೇಹ ಕೂಡಾ ಸಿಕ್ಕಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಕುರಿತು ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









