ಹಿಜಾಬ್ ಬೇಕೆನ್ನುವ ವಿದ್ಯಾರ್ಥಿನಿಯರಿಗೆ ಆನ್‌ಲೈನ್ ತರಗತಿ : ರಘುಪತಿ ಭಟ್.

70
firstsuddi

ಉಡುಪಿ : ಹಿಜಾಬ್ ಬೇಕೆನ್ನುವ ವಿದ್ಯಾರ್ಥಿನಿಯರಿಗೆ ಆನ್‌ಲೈನ್ ಕ್ಲಾಸ್ ಮೂಲಕ ಪಾಠ ಕೇಳಲು ಅವಕಾಶ ಕಲ್ಪಿಸಿ ನಂತರ ಪರೀಕ್ಷೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗುವುದು ಎಂದು ಉಡುಪಿ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರವಾಗಿ ಸರ್ಕಾರ ಯಥಾಸ್ಥಿತಿ ಕಾಪಾಡುವಂತೆ ಹೊರಡಿಸಿದ ಆದೇಶ ಸಂಬಂಧ ನಿನ್ನೆ ಕಾಲೇಜು ಅಭಿವೃದ್ಧಿ ಸಮಿತಿ ನಡೆಸಿದ ಸಭೆಯ ಬಳಿಕ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ. ಬಾವ ನೇತೃತ್ವದಲ್ಲಿ ಮುಸ್ಲಿಂ ಮುಖಂಡರು ಭೇಟಿ ಮಾಡಿ ಚರ್ಚಿಸಿದ್ದರು. ಆ ಬಳಿಕ ಕಾಲೇಜು ಅಭಿವೃದ್ಧಿ ಸಮಿತಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಯಾರದ್ದೋ ಕುಮ್ಮಕ್ಕಿನಿಂದ ಪೋಷಕರು ಮಕ್ಕಳ ಭವಿಷ್ಯ ಹಾಳು ಮಾಡುವುದು ಸರಿಯಲ್ಲ. ಕಾಲೇಜಿನಲ್ಲಿ ಶಿಸ್ತು ಎಂಬುದು ಅತಿ ಅಗತ್ಯ. ಹಾಗಾಗಿ ಕಾಲೇಜು ಮತ್ತು ಮಕ್ಕಳ ಭವಿಷ್ಯದ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳಿಗೆ ತಿಳಿಹೇಳಿ ಹಿಂದೆ ಇದ್ದ ಪದ್ಧತಿ ಮುಂದುವರೆಸಲು ಅವಕಾಶ ಕಲ್ಪಿಸಬೇಕು. ನಾವು ಯಾವುದೇ ಕಾರಣಕ್ಕೂ ಆ ಪದ್ಧತಿಯನ್ನು ಬದಲಾಯಿಸುವುದಿಲ್ಲ ಎಂದು ಹೇಳಿದರು.

ಹಿಜಾಬ್ ಹಾಕಲು ಒಂದು ಕಾಲೇಜಿನಲ್ಲಿ ಅವಕಾಶ ನೀಡಿದರೆ ಮುಂದೆ ಎಲ್ಲ ಕಾಲೇಜಿನಲ್ಲಿ ಇದು ಆರಂಭವಾಗುತ್ತದೆ. ಬಳಿಕ ಇದಕ್ಕೆ ಪ್ರತಿರೋಧವಾಗಿ ಕೇಸರಿ ಶಾಲು, ಕೇಸರಿ ಪೇಟ ಧರಿಸಿಕೊಂಡು ಬರುವ ವಿವಾದವೂ ಎದುರಾಗುತ್ತದೆ. ಜಿಲ್ಲೆಯ ಕೋಮು ಸೌಹಾರ್ದತೆಕ್ಕೆ ಈ ಸಣ್ಣ ವಿಚಾರದಿಂದ ಧಕ್ಕೆಯಾಗದಂತೆ ಮುಖಂಡರಿಗೆ ಮನವಿ ಮಾಡಿದ್ದೇವೆ. ಅವರು ಪೋಷಕರೊಂದಿಗೆ ಮಾತನಾಡಿ ಎರಡು ದಿನಗಳಲ್ಲಿ ಮತ್ತೆ ನಮ್ಮನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ಉಡುಪಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರ ಪೋಷಕರನ್ನು ಪ್ರಾಂಶುಪಾಲರು ಕರೆದು, ಹಿಜಾಬ್ ಧರಿಸದೆ ತರಗತಿ ಬರುವಂತೆ ಮನವಿ ಮಾಡಲಿದ್ದಾರೆ. ಈಗಾಗಲೇ ಒಂದೂವರೆ ವರ್ಷ ಹಿಜಾಬ್ ಇಲ್ಲದೆ ಇವರು ತರಗತಿಗೆ ಬಂದಿದ್ದಾರೆ. ಇನ್ನೂ ಕೇವಲ ಒಂದು ತಿಂಗಳು ಮಾತ್ರ ತರಗತಿ ಇರುತ್ತದೆ. ಆ ನಂತರ ಪರೀಕ್ಷೆ ನಡೆಯುತ್ತದೆ. ಒಂದು ವೇಳೆ ವಿದ್ಯಾರ್ಥಿನಿಯರು ಹಾಗೂ ಪೋಷಕರು ಹಿಜಾಬ್ ಇಲ್ಲದೆ ಬರಲು ಒಪ್ಪದಿದ್ದರೆ ನಾವು ತರಗತಿ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಅವರಿಗೆ ಬೇಕಾದರೆ ಆನ್‌ಲೈನ್ ತರಗತಿ ಮಾಡಿ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗುವುದು ಎಂದರು.