ಹಿಜಾಬ್ ವಿವಾದ – ವಿಚಾರಣೆ ನಾಳೆಗೆ ಮುಂದೂಡಿಕೆ…

74
firstsuddi

ಬೆಂಗಳೂರು : ಹಿಜಾಬ್ ವಿವಾದ ಸಂಬಂಧಿಸಿದಂತೆ ವಿಚಾರಣೆಯನ್ನು ಹೈಕೋರ್ಟ್ ನಾಳೆ ಮಧ್ಯಾಹ್ನ 2.30 ಕ್ಕೆ ಮುಂದೂಡಿದೆ.

ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದ್ದು, ಹೈಕೋರ್ಟ್ ಇಂದು ಮಹತ್ವದ ವಿಚಾರಣೆ ನಡೆಸಿದೆ. ವಿವಾದ ಸಂಬಂಧ ಸಲ್ಲಿಕೆಯಾಗಿರುವ ನಾಲ್ಕು ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿದ್ದು, ಎಲ್ಲ ಭಾವನೆಗಳನ್ನು ಪಕ್ಕಕ್ಕೆ ಇರಿಸಿ. ಸಂವಿಧಾನ ಏನು ಹೇಳುತ್ತದೋ ಅದರಂತೆ ನಡೆಯುತ್ತೇವೆ. ಭಗದ್ಗೀತೆಗಿಂತ ಸಂವಿಧಾನವೇ ಮೇಲು ಎಂದು ವಿಚಾರಣೆ ವೇಳೆ ಹೇಳಿದ್ದಾರೆ.

ವಿಚಾರಣೆ ವೇಳೆ ವಿವಾದ ಸಂಬಂಧ ಮಧ್ಯಪ್ರವೇಶಿಸಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದ್ದು, ಸಮವಸ್ತ್ರವನ್ನು ನಿರ್ಧರಿಸಲು ನಾವು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಸ್ವಾತಂತ್ರ್ಯ ನೀಡಿದ್ದೇವೆ. ವಿದ್ಯಾರ್ಥಿಗಳು ಅದನ್ನು ಪಾಲಿಸುತ್ತಾರೆಂದು ಅಡ್ವೊಕೇಟ್ ಜನರಲ್ ಹೇಳಿದ್ದಾರೆ.

ಹಿಜಾಬ್ ಪರ ವಾದ ಮಂಡನೆ ಮಾಡಿದ ಹಿರಿಯ ವಕೀಲ ದೇವದತ್ತ ಕಾಮತ್ ಅವರು, ಸ್ಕಾರ್ಫ್ ಧರಿಸುವುದು ಇಸ್ಲಾಮಿಕ್ ಧರ್ಮದ ಭಾಗವಾಗಿದೆ. ಪವಿತ್ರ ಕುರಾನ್ ಸೂಚಿಸಿದಂತೆ ಇದು ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ. ಮದ್ರಾಸ್, ಬಾಂಬೆ ಮತ್ತು ಕೇರಳ ಕೋರ್ಟ್ಗಳು ಇಂಥಹ ಸಮಸ್ಯೆಯನ್ನು ನಿಭಾಯಿಸುವುದಿಲ್ಲ. ಹಿಜಾಬ್ ಧರಿಸುವುದು ಸಂವಿಧಾನ ಆರ್ಟಿಕಲ್ 19(1)(ಎ) ಮತ್ತು ಆರ್ಟಿಕಲ್ 19(6) ಅಡಿಯಲ್ಲಿ ಬರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಿಂದ ರಕ್ಷಿಸಲ್ಪಟ್ಟಿದೆ. ಹಿಜಾಬ್ ಧರಿಸುವುದು ಖಾಸಗಿತನದ ಹಕ್ಕಿಗೆ ಸಂಬಂಧಿಸಿದ ಅಂಶವಾಗಿದೆ. ಇದನ್ನು ಸಂವಿಧಾನ 21ನೇ ವಿಧಿಯಲ್ಲಿ ಈ ಮೂಲಕ ಖಾಸಗಿತನವನ್ನು ಉಲ್ಲೇಖಿಸಲಾಗಿದೆ ಎಂದು ಹೇಳಿದರು.

ಅಲ್ಲದೆ, ಕೇರಳ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ವಕೀಲರು, ಜಾತ್ಯಾತೀತ ಭಾವನೆ ಒಂದು ಧರ್ಮಕ್ಕೆ ಯಾವುದು ಮೂಲಭೂತ ಎಂದು ಹೇಳಲು ಆಗಲ್ಲ. ವಯಸ್ಕಳಾದ ಬಳಿಕ ಅಪರಿಚಿತರಿಗೆ ಮುಖ ಮತ್ತು ಕೈ ತೋರಿಸುವಂತಿಲ್ಲ ಎಂದು ಖುರಾನ್ ನಲ್ಲಿ ಹೇಳಿದೆ. ಹಾಗಾಗಿ ಅದಕ್ಕೆ ಹಿಜಾಬ್ ಧರಿಸೋದು. ಇದು ಸಹ ನಮ್ಮ ಮೂಲಭೂತ ಹಕ್ಕು. ಮುಖ ಬಿಟ್ಟು ದೇಹ ತೋರಿಸೋದು ನಿಷಿದ್ಧ. ಹಿಜಾಬ್ ಮೂಲಭೂತ ಹಕ್ಕು ಎಂದು ಕೇರಳ ಹೈಕೋರ್ಟ್ ಹೇಳಿದೆ. ಹಾಗಾಗಿ ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಿ ಎಂದರು.

ಈ ವೇಳೆ ನ್ಯಾಯಾಧೀಶರು ಖುರಾನ್ ಪ್ರತಿಯನ್ನು ತರಿಸಿಕೊಂಡು ಗಮನಿಸಿದರು. ಖುರಾನ್ ನಲ್ಲಿ ಮಹಿಳೆಯರು ಧರಿಸಿರುವ ಉಡುಪಿನ ಬಗ್ಗೆ ಮಾಹಿತಿ ಪಡೆದುಕೊಂಡರು. ಖುರಾನ್ ನಲ್ಲಿಯೇ ಎಲ್ಲವೂ ಮೂಲಭೂತ ಆಚರಣೆಗಳೇನಾ? ಇವುಗಳ ವ್ಯಾಪ್ತಿ ಏನು? ಹಿಜಾಬ್ ಬಗ್ಗೆ ಖುರಾನ್ ನಲ್ಲಿರುವ ಮಾಹಿತಿ ಓದಿ ಎಂದು ವಕೀಲರಿಗೆ ಸೂಚಿಸಿದರು. ಸರ್ಕಾರಗಳು ಆದೇಶ ಹೊರಡಿಸಬಹುದು. ನಾಗರೀಕರು ಪ್ರಶ್ನೆ ಮಾಡಬಹುದು. ಆದೇಶವನ್ನು ನೀಡುವಂತಿಲ್ಲ ಎಂದು ಹೇಳುವಂತಿಲ್ಲ. ಸರ್ಕಾರ ಸಂವಿಧಾನದ ಒಂದು ಭಾಗ. ಸರ್ಕಾರಗಳ ಊಹೆಗಳ ಮೇಲೆ ನಿರ್ಧಾರಕ್ಕೆ ಬರಲು ಆಗಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.