ಹುಬ್ಬಳ್ಳಿ : ಕನ್ನಡದ ಹಿರಿಯ ನಟ, ಸಾಹಿತಿ, ಚಿಂತಕ ಪ್ರೊ. ಜಿ.ಕೆ.ಗೋವಿಂದರಾವ್ ಅವರು ನಿಧನರಾಗಿದ್ದಾರೆ.
84 ವರ್ಷದ ಗೋವಿಂದರಾವ್ ಅವರು, ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಮಾಲ್ಗುಡಿ ಡೇಸ್, ಮಹಾಪರ್ವ ಧಾರಾವಾಹಿ ಸೇರಿದಂತೆ ಹಲವಾರು ಧಾರವಾಹಿಗಳಲ್ಲಿ, ಚಲನಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು. ಲೇಖಕರಾಗಿ, ಪ್ರಾಧ್ಯಾಪಕರಾಗಿ, ರಂಗಭೂಮಿ ಕಲಾವಿದರಾಗಿ, ಚಿತ್ರ ನಟರಾಗಿ ಅವರು ಗುರುತಿಸಿಕೊಂಡಿದ್ದರು.
ಹುಬ್ಬಳ್ಳಿಯ ಮುಕ್ತಿಧಾಮದಲ್ಲಿ ಬೆಳಗ್ಗೆ 8.30ರ ಸುಮಾರಿಗೆ ಗೋವಿಂದ್ ರಾವ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ.
ಜಿ.ಕೆ.ಗೋವಿಂದರಾವ್ ನಿಧನಕ್ಕೆ ವಿರೋಧ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಪ್ರೊ.ಜಿ.ಕೆ.ಗೋವಿಂದರಾವ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ನನ್ನ ಹಿತೈಷಿ, ಮಾರ್ಗದರ್ಶಕ ಮತ್ತು ಆತ್ಮೀಯ ಸ್ನೇಹಿತರಾಗಿದ್ದ ಗೋವಿಂದರಾವ್ ಅವರಿಗೆ ಗೌರವ ನಮನಗಳು. ಅವರನ್ನು ಕಳೆದುಕೊಂಡ ಕುಟುಂಬದ ಸದಸ್ಯರು, ಶಿಷ್ಯರು, ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.










