ಬೆಂಗಳೂರು : ಮೈಸೂರಿನಲ್ಲಿ ಹಿರಿಯ ಸಾಹಿತಿ ಕೆ.ಎಸ್.ಭಗವಾನ್ ಅವರು ಹಿಂದೂ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ಆರೋಪ ಸಂಬಂಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾಹಿತಿ ಭಗವಾನ್ ಇಂದು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರಾಗಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಭಗವಾನ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ವಿಚಾರಣೆ ಬಳಿಕ ಕೋರ್ಟ್ ನಿಂದ ಹೊರಬಂದ ಭಗವಾನ್ ಮುಖಕ್ಕೆ ವಕೀಲೆ ಮೀರಾ ರಾಘವೇಂದ್ರ ಅವರು ಮಸಿ ಬಳಿದಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಮೈಸೂರಿನಲ್ಲಿ ಕೆ.ಎಸ್.ಭಗವಾನ್, ಹಿಂದೂ ಧರ್ಮ ಧರ್ಮವೇ ಅಲ್ಲ. ಹಿಂದೂ ಧರ್ಮ ಎಂದರೆ ಬ್ರಾಹ್ಮಣರು ಎಂದರ್ಥ. ಗ್ರಾಮೀಣ ಜನರಿಗೆ ಹಿಂದೂ ಎಂದರೆ ಏನೆಂದು ಗೊತ್ತೇ ಇಲ್ಲ. ನೀವು ಯಾವ ಧರ್ಮ ಎಂದರೆ ಒಕ್ಕಲಿಗ, ಕುರುಬ ಎಂದು ಜಾತಿಗಳ ಹೆಸರನ್ನಷ್ಟೇ ಹೇಳುತ್ತಾರೆ. ಹೀಗಾಗಿ, ಹಿಂದೂ ಪದವನ್ನು ತೆಗೆದು ಹಾಕಬೇಕು, ಶ್ರೀರಾಮನು ದೇವರು ಅಲ್ಲ, ರಾಮನು ಮದ್ಯಪಾನ ಮಾಡುತ್ತಿದ್ದ. ಆತ ಮಾಂಸಾಹಾರಿ, ಮಾನಿನಿಯರ ಜೊತೆ ನೃತ್ಯ ಮಾಡುತ್ತಾ ಕಾಲ ಕಳೆಯುತ್ತಿದ್ದ ಎಂದು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಸಂಬಂಧ ನ್ಯಾಯಾಲಯದಲ್ಲಿ ಮೀರಾ ರಾಘವೇಂದ್ರ ಅವರು ದೂರು ದಾಖಲಿಸಿದ್ದರು. ಇದೇ ಪ್ರಕರಣಕ್ಕೆ ಜಾಮೀನು ಪಡೆದು ಹೊರ ಬರುತ್ತಿದ್ದಂತೆ ಮೀರಾ ರಾಘವೇಂದ್ರ ಅವರು ಭಗವಾನ್ ಮುಖಕ್ಕೆ ಮಸಿ ಬಳಿದಿದ್ದಾರೆ.










