ಲಕ್ನೋ : ಗನ್ ಹಿಡಿದು ಸೆಲ್ಫಿ ತೆಗೆದುಕೊಳ್ಳುವಾಗ ಮಹಿಳೆ ಅಚಾನಕ್ಕಾಗಿ ತನಗೆ ತಾನೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ.
26 ವರ್ಷದ ನವ ವಿವಾಹಿತೆ ರಾಧಿಕಾ ಗುಪ್ತಾ ಗುರುವಾರ ಸಂಜೆ ತನ್ನ ಮಾವನ ಸಿಂಗಲ್ ಬ್ಯಾರಲ್ ಗನ್ ಹಿಡಿದು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಈ ದುರಂತ ನಡೆದಿದೆ. ಗನ್ ಲೋಡ್ ಆಗಿರುವುದನ್ನು ತಿಳಿಯದ ರಾಧಿಕಾ ಗುಪ್ತಾ, ಟ್ರಿಗರ್ ಮೇಲೆ ತನ್ನ ಬೆರಳು ಇಟ್ಟು ಸೆಲ್ಫಿಗೆ ಪೋಸ್ ನೀಡಿದ್ದಾಳೆ. ಆದರೆ ಅಚಾನಕ್ಕಾಗಿ ಟ್ರಿಗರ್ ಒತ್ತಿದ್ದು, ಪರಿಣಾಮ ಗುಂಡು ರಾಧಿಕಾಳ ಗಂಟಲು ಹೊಕ್ಕಿದೆ. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಮಾರ್ಗಮಧ್ಯೆದಲ್ಲೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಸಂಬಂಧ ರಾಧಿಕಾ ಗುಪ್ತಾ ಮಾವ ರಾಜೇಶ್ ಗುಪ್ತಾ ಪ್ರತಿಕ್ರಿಯಿಸಿದ್ದು, ರಾಧಿಕಾ ಮೇ 2021ರಲ್ಲಿ ನನ್ನ ಮಗ ಆಕಾಶ್ ಗುಪ್ತಾ ಜೊತೆ ಮದುವೆಯಾಗಿದ್ದಳು ಎಂದು ತಿಳಿಸಿದ್ದಾರೆ. ಘಟನೆಯಿಂದ ಆತಂಕಗೊಂಡಿರುವ ಮಹಿಳೆಯ ತಂದೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
12 ಬೋರ್ ನ ಸಿಂಗಲ್ ಬ್ಯಾರಲ್ ಗನ್ ಹಾಗೂ ಸಂತ್ರಸ್ತೆಯ ಮೊಬೈಲ್ ವಶಪಡಿಸಿಕೊಂಡಿದ್ದೇವೆ. ಫೊರೆನ್ಸಿಕ್ ಪರೀಕ್ಷೆಗೆ ಕಳುಹಿಸಿದ್ದೇವೆ. ಅವಳು ಸಾಯುವುದಕ್ಕೂ ಕೆಲಸ ಸೆಕೆಂಡುಗಳ ಮುಂಚೆ ಈ ಫೋಟೋ ಕ್ಲಿಕ್ಕಿಸಲಾಗಿದೆ. ಮೃತ ದೇಹವನ್ನು ಪೋಸ್ಟ್ ಮಾರ್ಟಮ್ ಗೆ ಕಳುಹಿಸಲಾಗಿದೆ ಎಂದು ಶಹಬಾದ್ ಎಸ್ ಎಚ್ ಒ ಶಿವಶಂಕರ್ ಸಿಂಗ್ ಹೇಳಿದ್ದಾರೆ.










