ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ಉಡವೇಪುರ ಗ್ರಾಮದ ಬಳಿ ಹುಲಿ ದಾಳಿಯಿಂದ ರೈತನೋರ್ವ ಬಲಿಯಾಗಿದ್ದಾನೆ.
ಗಣೇಶ್(55) ಮೃತ ದುರ್ದೈವಿ. ಈತ ಎಂದಿನಂತೆ ನಿನ್ನೆ ಗ್ರಾಮದ ಮುದ್ದೇನಹಳ್ಳಿ ಅರಣ್ಯಪ್ರದೇಶದ ಅಂಚಿನಲ್ಲಿ ದನಗಳನ್ನು ಮೇಯಿಸಲು ಹೋಗಿದ್ದು, ಸಂಜೆ ದನಗಳು ಮನೆಗೆ ಬಂದರೂ ಗಣೇಶ್ ಮನೆಗೆ ಬಂದಿರಲಿಲ್ಲ. ಅನುಮಾನಗೊಂಡು ಕುಟುಂಬಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದಾಗ ಗಣೇಶ್ ಅವರ ಮೃತದೇಹ ಮುದ್ದೇನಹಳ್ಳಿಯ ಅರಣ್ಯ ಪ್ರದೇಶದ ಬಫರ್ ಏರಿಯಾದ ಪ್ರದೇಶದಲ್ಲಿ ಇರುವ ಕೆರೆ ಬಳಿ ದೊರಕಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಕೂಡಲೇ ಹುಲಿಯನ್ನು ಸೆರೆ ಹಿಡಿಯಬೇಕು ಹಾಗೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.










