ನವದೆಹಲಿ : ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಘನಘೋರ ದುರಂತದಲ್ಲಿ ಹುತಾತ್ಮರಾದ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರೆ 11 ಸೇನಾಧಿಕಾರಿಗಳ ಪಾರ್ಥಿವ ಶರೀರಗಳನ್ನು ನಿನ್ನೆ ದೆಹಲಿಯ ಪಾಲಂ ವಾಯುನೆಲೆಗೆ ತರಲಾಯ್ತು. ಗಣ್ಯರು, ಸೇನಾ ಮುಖ್ಯಸ್ಥರು ಅಂತಿಮ ನಮನವನ್ನು ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಪುಷ್ಪ ನಮನ ಬಳಿಕ ಗೌರವಾರ್ಪಣೆ ಮಾಡಿದ್ರು. ಬಳಿಕ ಹುತಾತ್ಮ ಸೈನಿಕರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಜೊತೆಗೆ ಪಾಲಂ ವಾಯುನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೂ ಗುಚ್ಛ ಇರಿಸಿ ಅಂತಿಮ ನಮನ ಸಲ್ಲಿಸಿದ್ರು. ಇನ್ನೂ ಹುತಾತ್ಮ ಸೇನಾಧಿಕಾರಿಗಳಿಗೆ ಮೂರು ಸೇನೆಯ ಮುಖ್ಯಸ್ಥರು ಅಂತಿಮ ನಮನ ಸಲ್ಲಿಸಿದ್ರು. ಸೇನಾ ಮುಖ್ಯಸ್ಥ ಜನರಲ್ ನರಾವಣೆ, ನೌಕಾದಳದ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್, ವಾಯು ಸೇನೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್ ಚೌಧರಿ ಹುತಾತ್ಮ ಸೇನಾಧಿಕಾರಿಗಳಿಗೆ ಹೂ ಗುಚ್ಛ ಇರಿಸಿ ಶ್ರದ್ದಾಂಜಲಿ ಸಲ್ಲಿಸಿದ್ರು.
ಸದ್ಯ ದೆಹಲಿಯ ಧೌಲಾ ಖಾನ್ ನ ಆಸ್ಪತ್ರೆಯಲ್ಲಿ ಹುತಾತ್ಮರ ಪಾರ್ಥಿವ ಶರೀರಗಳನ್ನು ಇರಿಸಲಾಗಿದೆ. ಜನರಲ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಬ್ರಿಗೇಡಿಯರ್ ಲಿಡ್ಡರ್ ಪಾರ್ಥಿವ ಶರೀರವನ್ನು ಇಲ್ಲಿಯವರೆಗೆ ಗುರುತಿಸಲಾಗಿದ್ದು, ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ ಎಂದು ಸೇನೆ ತಿಳಿಸಿದೆ. ಉಳಿದ 10 ಮಂದಿಯ ಮೃತದೇಹಗಳ ಕುಟುಂಬ ಸದಸ್ಯರಿಂದ ಗುರುತು ಪತ್ತೆ ಸಾಧ್ಯವಾಗದಿದ್ರೆ, ಡಿಎನ್ಎ ಪರೀಕ್ಷೆ ಮೂಲಕ ಕಂಡು ಹಿಡಿಯಲಾಗುತ್ತದೆ. ನಂತರ ಸೇನೆಯ ಗೌರವಗಳನ್ನು ಸಲ್ಲಿಸಿ ಕುಟುಂಬ ಸದಸ್ಯರಿಗೆ ಪಾರ್ಥಿವ ಶರೀರ ಹಸ್ತಾಂತರ ಮಾಡಲಾಗುತ್ತದೆ ಎಂದು ತಿಳಿಸಿದೆ.
ಇಂದು ಸಕಲ ಸೇನಾ ಗೌರವಗಳೊಂದಿಗೆ ಸಿಡಿಎಸ್ ರಾವತ್ ದಂಪತಿ ಮತ್ತು ಬ್ರಿಗೇಡಿಯರ್ ಲಿಡ್ಡರ್ ಅಂತ್ಯಕ್ರಿಯೆ ನಡೆಯಲಿದೆ. ಉಳಿದ ಹುತಾತ್ಮರ ಪಾರ್ಥಿವ ಶರೀರಗಳನ್ನು ಅವರವರ ಸ್ವಗ್ರಾಮಗಳಿಗೆ ಕಳಿಸಲಾಗುತ್ತದೆ. ನಾಳೆ ಅಥವಾ ನಾಡಿದ್ದು ಸಕಲ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆಗಳು ನೆರವೇರಲಿವೆ.










