ಕೊಡಗು : ಹುಲಿ ದಾಳಿಗೆ 12 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಕುಟ್ಟಾ ಸಮೀಪದ ಪಾಲೇರಿ ಗ್ರಾಮದಲ್ಲಿ ಸಂಭವಿಸಿದೆ.
ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿ ಗ್ರಾಮದ ಚೇತನ್ (12) ಹುಲಿ ದಾಳಿಗೆ ಬಲಿಯಾದ ಬಾಲಕ. ಕೆ ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂರಿಕಾಡು ನೆಲ್ಲಿರ ಪೂಣಚ್ಚ ಎಂಬುವವರ ಮನೆಯಲ್ಲಿ ಕೆಲಸ ಮಾಡಲು ಬಾಲಕ ಮತ್ತು ಪೋಷಕರು ತೆರಳಿದ್ದರು. ಈ ವೇಳೆ ಕಾಫಿ ತೋಟದ ಮನೆಯ ಮುಂದೆ ಬಾಲಕ ಆಟವಾಡುತ್ತಿದ್ದನು. ಈ ವೇಳೆ ದಾಳಿ ಮಾಡಿದ ನರ ಭಕ್ಷಕ ಹುಲಿ ಬಾಲಕನನ್ನು ಕೊಂದು ಹಾಕಿದೆ. ಹುಲಿ ದಾಳಿಯಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಬರಲಿಲ್ಲ ಎಂದು ಆರೋಪಿಸಿ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಮತ್ತು ಪೋಷಕರು ಸ್ಥಳದಲ್ಲಿ ಬಾಲಕನ ಶವವಿಟ್ಟು ಪ್ರತಿಭಟನೆ ನಡೆಸಿದ್ದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.










