ಮೈಸೂರು : ಕೆಆರ್ ಎಸ್ ಅಣೆಕಟ್ಟು ಬಿರುಕು ವಿಚಾರ ಸಂಬಂಧ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಡುವೆ ವಾಗ್ವಾದಗಳು ನಡೆಯುತ್ತಿವೆ. ಈ ಮಧ್ಯೆ ಸಂಸದ ಪ್ರತಾಪ್ ಸಿಂಹ ಅವರು ಹೆಚ್‍ಡಿಕೆ ಪರ ಬ್ಯಾಟಿಂಗ್ ಮಾಡಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್ ಎಸ್ ಅಣೆಕಟ್ಟು ಬಿರುಕು ಬಿಟ್ಟಿಲ್ಲ ಎಂದು ಅಧಿಕಾರಿಗಳೇ ತಿಳಿಸಿದ್ದಾರೆ. ಅಂಥಹದರಲ್ಲಿ ಡ್ಯಾಂ ಬಿರುಕು ಬಿಟ್ಟಿದೆ ಅನ್ನೋದು ಸರಿಯಲ್ಲ ಎಂದು ಪರೋಕ್ಷವಾಗಿ ಸಂಸದೆ ಸುಮಲತಾ ಅವರಿಗೆ ಟಾಂಗ್ ನೀಡಿದರು.
ಇನ್ನೂ ಅಕ್ರಮ ಗಣಿಗಾರಿಕೆ ಸ್ಥಳಗಳಲ್ಲಿ ಸುಮಲತಾಗೆ ಅಡ್ಡಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರ ಹೇಳಿಕೆಯನ್ನು ಮಾಧ್ಯಮದವರು ಸತ್ಯ ಎಂದು ಭಾವಿಸಬೇಡಿ. ಸತ್ಯದ ಆಳಕ್ಕೆ ಹೋಗಿ ತಿಳಿದುಕೊಳ್ಳುವ ಮನಸ್ಥಿತಿ ಮಾಧ್ಯಮದವರಿಗೆ ಇರಬೇಕಾಗುತ್ತದೆ. ರಾಜಕೀಯವಾಗಿ ಯಾರು ಏನ್ ಬೇಕಾದರೂ ಹೇಳಿಕೆ ಕೊಡಬಹುದು. ಯಾರು ಕೂಡ ಎಲ್ಲಿಯೂ ಅಡ್ಡಿಪಡಿಸಿಲ್ಲ. ಇದೊಂದು ರಾಜಕೀಯ ಅಷ್ಟೇ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜೊತೆ ನಾನು ಮಾತನಾಡಿದ್ದೇನೆ. ಅಲ್ಲಿ ಯಾವುದು ಸಮಸ್ಯೆ ಇಲ್ಲ. ಈ ಹಿಂದೆ ಕೂಡ ಮೈಸೂರು-ಬೆಂಗಳೂರು ದಶಪಥ ರಸ್ತೆ ಮಾಡುವುದಕ್ಕೂ ಬಿಡಲಿಲ್ಲ. ಸುಳ್ಳು ನೆಪಗಳನ್ನು ಹೇಳಿ ಕೆಲಸ ಮಾಡಲು ಅಡ್ಡಿಪಡಿಸಿದರು ಎಂದು ಸುಮಲತಾ ವಿರುದ್ಧ ಆರೊಪ ಮಾಡಿದ್ದಾರೆ.










