ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ನುಗ್ಗಿಹಳ್ಳಿ ಕ್ರಾಸ್ ಬಳಿ ಜ. 4 ರಂದು ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹೆಲ್ಮೆಟ್ನಿಂದ ಹೊಡೆದು ಕೊಂದು ಬಳಿಕ ಅಪಘಾತದ ನಾಟಕವಾಡಿದ್ದು, ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತಳನ್ನು ಯಶೋದಾ ಎಂದು ಗುರುತಿಸಲಾಗಿದ್ದು, ಈಕೆ 3 ತಿಂಗಳ ಗರ್ಭಿಯಾಗಿದ್ದರು. ಚನ್ನಗಿರಿ ತಾಲೂಕಿನ ಸಾರಥಿ ಹೊಸೂರು ಗ್ರಾಮದ ನಿವಾಸಿ ಯಶೋದಾ, ನರಗನಹಳ್ಳಿ ಗ್ರಾಮದ ತಿಪ್ಪೇಶ್ (28) ಎಂಬಾತನನ್ನ ಪ್ರೀತಿಸಿ ಆರು ತಿಂಗಳ ಹಿಂದೆ ಮದುವೆ ಆಗಿದ್ದರು. ಅಂತೆಯೇ ಜನವರಿ 4 ರಂದು ಪತಿ ಜೊತೆ ಯಶೋದಾ ತವರಿಗೆ ಬಂದಿದ್ದರು. ತವರು ಮನೆಯಿಂದ ವಾಪಸ್ ಹೋಗುವಾಗ ಬೈಕ್ ಅಪಘಾತವಾಗಿ ಯಶೋದಾ ಸಾವನ್ನಪ್ಪಿದ್ದಾಳೆ ಎಂದು ಸಂಬಂಧಿಕರಿಗೆ ಪತಿ ತಿಪ್ಪೇಶ್ ಮಾಹಿತಿ ನೀಡಿದ್ದ.
ಕೂಡಲೇ ಸ್ಥಳಕ್ಕೆ ಬಂದು ಯಶೋದಾಳ ಶವ ನೋಡಿದ ತಂದೆ ಚಂದ್ರಪ್ಪಗೆ ಇದು ಕೊಲೆ ಎಂಬ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನಲೆ ತನ್ನ ಪುತ್ರಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿಲ್ಲ, ಬದಲಾಗಿ ಕೊಲೆಯಾಗಿದೆ ಎಂದು ಯಶೋದಾ ತಂದೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದಾಗ ಸತ್ಯ ಬಹಿರಂಗವಾಗಿದೆ. ತಾನೇ ಹೊಡೆದು ಸಾಯಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಈ ಕುರಿತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










