ಹೈದರಾಬಾದ್ : ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಅಪ್ರಾಪ್ತ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ತಿಂಗಳ ಹಿಂದೆ ಹೈದರಾಬಾದ್ ನ ಜುಬಿಲಿ ಹಿಲ್ಸ್ ನಲ್ಲಿ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ತೆಲಂಗಾಣದಲ್ಲಿ ಭಾರೀ ಆಕ್ರೋಶ ಮಾತ್ರವಲ್ಲದೆ, ರಾಜಕೀಯ ಜಟಾಪಟಿಗೂ ಕಾರಣವಾಗಿತ್ತು.
ಈಗಾಗಲೇ ರಾಜಕಾರಣಿಯ ಪುತ್ರ ಸೇರಿದಂತೆ ಮೂವರು ಆರೋಪಿಗಳನ್ನು ಬಾಲಾಪರಾಧಿಗೃಹದಿಂದ ಬಿಡುಗಡೆ ಮಾಡಲಾಗಿದೆ. ಪ್ರಕರಣದಲ್ಲಿ ಬಂಧಿತರಾಗಿರುವ 4ನೇ ಬಾಲಕನಿಗೆ ಜಾಮೀನು ದೊರೆತರೂ ಕಾರಣಾಂತರಗಳಿಂದ ಬಿಡುಗಡೆ ವಿಳಂಬವಾಗಿದ್ದು, ಜಾಮೀನಿಗಾಗಿ ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದಾನೆ. ಪ್ರಕರಣದ ಏಕೈಕ ವಯಸ್ಕ ಆರೋಪಿ ಸದುದ್ದೀನ್ ಮಲ್ಲಿಕ್ ಜೈಲಿನಲ್ಲಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ? : ಮೇ 28ರಂದು ಹೈದರಾಬಾದ್ ನ ಪ್ರತಿಷ್ಠಿತ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಐಷಾರಾಮಿ ಕಾರಿನಲ್ಲಿ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಗಂಭೀರ ಆರೋಪದಡಿ ಆರು ಆರೋಪಿಗಳನ್ನು ಬಂಧಿಸಲಾಗಿತ್ತು. ಬಂಧಿತ ಅಪ್ರಾಪ್ತ ಆರೋಪಿಗಳು 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಾಗಿದ್ದು, ರಾಜಕೀಯ ಪ್ರಭಾವಿ ಕುಟುಂಬದವರಾಗಿದ್ದಾರೆ ಎಂದು ತಿಳಿದು ಬಂದಿತ್ತು.
ಪಬ್ ನಲ್ಲಿ ಪಾರ್ಟಿ ಮುಗಿಸಿ ಐವರು ಬಾಲಕರೊಂದಿಗೆ ಕಾರಿನಲ್ಲಿ ಬಂದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಯುವತಿ ಜೊತೆ ಒಬ್ಬ ಹುಡುಗ ಕೆಟ್ಟದಾಗಿ ವರ್ತಿಸುತ್ತಿರುವುದು ವಿಡಿಯೊದಲ್ಲಿದ್ದರೂ ಆತ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.










