ಮುಂಬೈ: ಇಂದು ಮಹಾರಾಷ್ಟ್ರದ ಲೋನಾವಾಲಾ ಬಳಿ ಮುಂಬೈ- ಪುಣೆ ಎಕ್ಸ್ಪ್ರೆಸ್ವೇಯಲ್ಲಿ ಆಯಿಲ್ ಟ್ಯಾಂಕರ್ ವೊಂದು ಭೀಕರ ಅಪಘಾತಕ್ಕೀಡಾಗಿ ಬೆಂಕಿಯಿಂದ ಹೊತ್ತಿಕೊಂಡಿದ್ದು, ಘಟನೆಯಲ್ಲಿ ನಾಲ್ವರು ಸಜೀವ ದಹನವಾಗಿದ್ದಾರೆ.
ಲೋನಾವಾಲಾ ಮೇಲ್ಸೇತುವೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಹೆದ್ದಾರಿಯ ಒಂದು ಬದಿ ಮಾತ್ರ ಬಳಕೆಯಲ್ಲಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದು ಪುಣೆ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಟ್ಯಾಂಕರ್ ಪಲ್ಟಿ ಹೊಡೆದ ಪರಿಣಾಮ ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡು ಉರಿದಿದೆ. ಬೆಂಕಿಯ ತೀವ್ರತೆ ಹೆಚ್ಚಾಗಿ ಬ್ರಿಡ್ಜ್ ಕೆಳಗೆ ಸಂಚರಿಸುತ್ತಿದ್ದವರ ಮೇಲೂ ಪರಿಣಾಮ ಬೀರಿದೆ.
ಸೇತುವೆಯ ಕೆಳಭಾಗದಲ್ಲಿ ಪ್ರಯಾಣಿಸುತ್ತಿದ್ದ ಬೈಕ್ ಸವಾರರಿಗೆ ಬೆಂಕಿ ತಗುಲಿದ್ದು, ಈ ಪೈಕಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ಅಗ್ನಿ ಅವಘಡದಿಂದಾಗಿ ರಕ್ಷಣಾ ಕಾರ್ಯಾಚರಣೆಯು ಯುದ್ಧೋಪಾದಿಯಲ್ಲಿ ನಡೆಯುತ್ತಿದ್ದು, ಸದ್ಯ ಲೋನಾವಾಲಾ ನಗರದಿಂದ ವಾಹನ ಸಂಚಾರವನ್ನು ಬದಲಿಸಲಾಗಿದೆ. ಎಕ್ಸ್ಪ್ರೆಸ್ವೇಯಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗಬಹುದು. ಆದ್ದರಿಂದ ರಕ್ಷಣಾ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ.










