ಹೊರಗುತ್ತಿಗೆ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲು : ಪಿ.ರವಿಕುಮಾರ್ ಆದೇಶ…

65
firstsuddi

ಬೆಂಗಳೂರು : ಸರ್ಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನಡೆಯುವ ಡಿ ಗ್ರೂಪ್ ಹುದ್ದೆಗಳ ನೇಮಕಾತಿಯಲ್ಲಿ ಶೇ. 33ರಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.

ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ವಾಹನ ಚಾಲಕರು, ಡಾಟಾ ಎಂಟ್ರಿ ಆಪರೇಟರ್, ಸ್ವಚ್ಛತಾ ಸಿಬ್ಬಂದಿಯಂತಹ ಗ್ರೂಪ್ ಡಿ ಹುದ್ದೆಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕು. ಡಿ-ಗ್ರೂಪ್‌ ಹುದ್ದೆಗಳನ್ನು ಹೊರಗುತ್ತಿಗೆ ಮೂಲಕ ಪಡೆಯುವ ಟೆಂಡರ್ ಪ್ರಕಟಣೆ ಮತ್ತು ಹೊರಗುತ್ತಿಗೆ ಏಜೆನ್ಸಿಗಳೊಂದಿಗೆ ಮಾಡಿಕೊಳ್ಳಲಾಗುವ ಒಪ್ಪಂದದಲ್ಲಿ ಈ ಅಂಶವನ್ನು ಸೇರಿಸಲು ಸಂಬಂಧಪಟ್ಟ ಟೆಂಡರ್‌ ಆಹ್ವಾನಿಸುವ ಪ್ರಾಧಿಕಾರಗಳು ಕ್ರಮ ಕೈಗೊಳ್ಳಬೇಕು.

ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯ, ಸ್ಥಳೀಯ ಸಂಸ್ಥೆಗಳು ಹಾಗೂ ಇನ್ನಿತರೆ ಸರ್ಕಾರಿ ವಲಯದ ಅಂಗ ಸಂಸ್ಥೆಗಳು ಕೂಡ ಪಾಲಿಸಬೇಕು. ಈ ಸಂಬಂಧ ಸರ್ಕಾರದ ಎಲ್ಲಾ ಆಡಳಿತ ಇಲಾಖೆಗಳ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ಇಲಾಖೆ, ಸಂಸ್ಥೆಗಳಿಗೆ ಸೂಚನೆ ನೀಡಬೇಕು. ಯಾವುದೇ ತೊಂದರೆ ಉಂಟಾದಲ್ಲಿ ಇಲಾಖೆ ಕಾರ್ಯದರ್ಶಿಗಳೇ ಬಗೆಹರಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.