ಹೊಸಪೇಟೆ : ದಸರಾ ಹಬ್ಬದ ಪ್ರಯುಕ್ತ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿಯ ದೇವಲಾಪುರ ಗ್ರಾಮದ ಐತಿಹಾಸಿಕ ಹಿನ್ನಲೆಯ ಗ್ರಾಮದೇವತೆಗಳಾದ ತಾರಿಹಳ್ಳಿ ದುರುಗಮ್ಮ ಮತ್ತು ಆನ್ವೇರಿ ದುರುಗಮ್ಮ ದೇವಸ್ಥಾನಗಳಲ್ಲಿ ವಿಜಯದಶಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
68 ವರ್ಷಗಳ ಇತಿಹಾಸವಿರುವ ಉಭಯ ದೇವಿಯರ ದೇವಸ್ಥಾನದಲ್ಲಿ ಕಳೆದ ಒಂಬತ್ತು ದಿನಗಳಿಂದ ದಿನನಿತ್ಯ ಉಭಯ ದೇವತೆಗಳಿಗೆ ಭಕ್ತರಿಂದ ಅಭಿಷೇಕ ಹೂವು ಹಣ್ಣುಗಳಿಂದ ಪೂಜೆಯನ್ನು ಸಲ್ಲಿಸಲಾಗಿದ್ದು, ನವರಾತ್ರಿಯ ದಿನದಂದು ದೇವಿಯರ ಮೂರ್ತಿಗಳನ್ನು ಆಂಜನೇಯ ದೇವಸ್ಥಾನದ ಪ್ರದಕ್ಷಿಣೆ ಹಾಕಿ, ನಂತರ ಗ್ರಾಮ ದೇವತೆಗಳನ್ನು ನಾ ಮುಂದು ತಾ ಮುಂದು ಎನ್ನುವ ರೀತಿ ಪೈಪೋಟಿಯಲ್ಲಿ ಹೋಗಿ ಬನ್ನಿ ಮುಡಿಯುವ ಕಾರ್ಯ ನಡೆಯುತ್ತದೆ.
ಪ್ರತಿ ವರ್ಷ ತಾರಿಹಳ್ಳಿ ದುರುಗಮ್ಮ ದೇವಿಯೇ ಗ್ರಾಮದ ಹೊರೆಗೆ ಇರುವ ಬನ್ನಿಕಾಳಮ್ಮನ ಕಟ್ಟೆಯ ಹತ್ತಿರ ಐದು ಸುತ್ತು ಪ್ರದಕ್ಷಿಣೆ ಹಾಕಿ ನಂತರ ಬನ್ನಿ ಮುಡಿಯುತ್ತಾಳೆ, ತದನಂತರ ಆನ್ವೇರಿ ದುರುಗಮ್ಮ ದೇವಿಯು ಬನ್ನಿಯನ್ನು ಮುಡಿದು ಎರಡು ದೇವತೆಗಳೂ ದೇವಸ್ಥಾನಗಳಿಗೆ ತೆರಳುವುದು ವಾಡಿಕೆ.
ಉಭಯ ದೇವತೆಗಳ ಐತಿಹಾಸಿಕ ಹಿನ್ನಲೆ:
ತಾರಿಹಳ್ಳಿ ದುರುಗಮ್ಮ ಮತ್ತು ಆನ್ವೇರಿ ದುರುಗಮ್ಮ ದೇವತೆಗಳು ಅಕ್ಕ-ತಂಗಿಯರೆಂದು ಹೇಳಲಾಗುತ್ತದೆ. ತುಂಗಾಭದ್ರ ಡ್ಯಾಂ ನಿರ್ಮಾಣ ಮಾಡುವ ಸಂದರ್ಭದಲ್ಲಿ ಮುಳುಗಡೆಯಾದ ಹಳ್ಳಿಗಳು ಈಗಿನ ಹನುಮನಹಳ್ಳಿಯಲ್ಲಿರುವ ಗೌರೀಪುರ, ಬಸಾಪುರ, ತಾರಿಹಳ್ಳಿ, ಆನ್ವೇರಿ, ಚತ್ರದಳ್ಳಿ ಹೀಗೆ ಒಟ್ಟು 45 ಹಳ್ಳಿಗಳು ಮುಳುಗಡೆಯಾಗಿದ್ದವು. ಅದರಲ್ಲಿ ಅಲ್ಲಿಂದ ಎರಡು ಗ್ರಾಮದ ಜನರು ವಲಸೆ ಬಂದು ದೇವಲಾಪುರ ಗ್ರಾಮಕ್ಕೆ ಬಂದು ನೆಲೆಸಿದರು. ಸಮೀಪದ ಹನುಮನಹಳ್ಳಿಯ ತಾರಿಹಳ್ಳಿ ಮತ್ತು ಆನ್ವೇರಿಯಿಂದಲೇ ಈ ಎರಡು ಗ್ರಾಮದೇವತೆಗಳನ್ನ ದೇವಲಾಪುರಕ್ಕೆ ತರಲಾಗಿದೆ. 68 ವರ್ಷಗಳಿಂದ ಇಂದಿನಿವರೆಗೂ ನವರಾತ್ರಿಯ ದಿನದಂದು ಗ್ರಾಮದ ಭಕ್ತರು ಬನ್ನಿ ಮುಡಿಯವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.
ನಂಬಿಕೆ: ಬನ್ನಿ ಮುಡಿಯುವದಕ್ಕೆ ಮುಂಚಿತವಾಗಿ ಪಲ್ಲಕ್ಕಿಯಿಂದ ದೇವಸ್ಥಾನವನ್ನು ಪ್ರದಕ್ಷಿಣೆ ಹಾಕುವ ಸಂದರ್ಭದಲ್ಲಿ ಆಕೆಯ ಕಾಲಡಿಯಲ್ಲಿ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಬೋರಲಾಗಿ ಮಲಗುತ್ತಾರೆ. ದೇವಿಯು ಅವರನ್ನು ತುಳಿದುಕೊಂಡು ಹೋದರೆ ಪಾಪ ಪರಿಹಾರವಾಗಿ ಕಾಯಿಲೆ ಇದ್ದರೆ ವಾಸಿಯಾಗುವುದಲ್ಲದೇ ಮುಂಬರುವ ದಿನಗಳಲ್ಲಿ ಕುಟುಂಬದವರಿಗೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇಂದಿಗೂ ಪ್ರಚಲಿತದಲ್ಲಿದೆ.
ಪರಸ್ಪರ ಬನ್ನಿ ಪತ್ರೆ ಹಾಗೂ ಹಿರಿಯರಿಗೆ ಬಟ್ಟೆ ಕೊಡುವ ಸಂಪ್ರದಾಯ:
ಗ್ರಾಮ ದೇವತೆಗಳು ಬನ್ನಿ ಮುಡಿದ ನಂತರ ಗ್ರಾಮದ ಜನತೆ ತಮ್ಮ ಮನೆಗಳಲ್ಲಿ ಹಿರಿಯರು ತೀರಿಕೊಂಡವರಿಗೆ ಅವರ ಪೋಟೊಗಳಿಗೆ ಹೊಸ ಬಟ್ಟೆ, ಸೀರೆ, ಲುಂಗಿ ಮತ್ತು ಟವಲ್‍ಗಳನ್ನು ಹಾಕಿ ಹೂವು ಹಣ್ಣುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸುವುದಲ್ಲದೇ ತಮ್ಮ ಕುಟುಂಬದ ಎಲ್ಲಾ ಸದಸ್ಯರು ಸೇರಿ ಬನ್ನಿ ಪತ್ರೆ ಹಾಕಿ ಆಶಿರ್ವಾದ ಪಡೆದುಕೊಂಡ ನಂತರ ಬನ್ನಿ ಹಾಗೂ ಬೇವಿನ ಪತ್ರೆಗಳಿಂದ ವೃದ್ಧರಿಗೆ, ತಂದೆ-ತಾಯಿ, ಅಣ್ಣ ತಮ್ಮ, ಅಕ್ಕ ತಂಗಿ ಹೀಗೆ ತಮ್ಮ ಎಲ್ಲಾ ಬಂಧು ಮಿತ್ರರಿಗೆ ಬನ್ನಿ ಪತ್ರೆಯನ್ನು ನೀಡಿ ಪರಸ್ಪರ ಶುಭ ಹಾರೈಸಿಕೊಳ್ಳುತ್ತಾರೆ.
ಪಟದ ಹರಾಜು: ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸೋಮವಾರದಂದು ತಾರಿಹಳ್ಳಿ ದುರುಗಮ್ಮ ಮತ್ತು ಆನ್ವೇರಿ ದುರುಗಮ್ಮ ದೇವಸ್ಥಾನಗಳಲ್ಲಿ ಪಟ ಹರಾಜು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಬಾರಿಯ ಹರಾಜಿನಲ್ಲಿ ತಾರಿಹಳ್ಳಿ ದುರುಗಮ್ಮ ದೇವಿಯ ಪಟದ ಹರಾಜನ್ನು ಆನ್ವೇರಿ ಕೆರಿಯ ಲಕ್ಷ್ಮಣ 25 ಸಾವಿರ ರೂಗಳಿಗೆ ಹಾಗೂ ಆನ್ವೇರಿ ದುರುಗಮ್ಮ ದೇವಿ ಪಟವನ್ನು ಕುರುಬರ ತಿರುಕಜ್ಜ 29 ಸಾವಿರ ರೂಗಳಿಗೆ ಹರಾಜಿನಲ್ಲಿ ಪಡೆದು ದೇವಿಯ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ದೇವಲಾಪುರ ಗ್ರಾಮದ ಮುಖಂಡರಾದ ಉಪ್ಪಾರ ಶ್ಯಾವಪ್ಪ, ಮಡಿವಾಳರ ಅಶೋಕ, ಉಪ್ಪಾರ ರಾಘವೇಂದ್ರ, ಕಟ್ಟಿ ಪ್ರಕಾಶ, ಮಂಜುನಾಥ ವಕೀಲರು, ಗ್ರಾ.ಪಂ ಸದಸ್ಯ ಅಳ್ಳಳ್ಳಿ ಮಂಜುನಾಥ, ಹೆಗ್ಡಾಳ್ ಹನುಮಂತಪ್ಪ, ಅಂಗಡಿ ಹುಲುಗಪ್ಪ, ಮಡಿವಾಳರ ಹನುಮಂತಪ್ಪ, ಕೇರಿಯ ಮುಂಖಂಡರಾದ ಹೆಚ್.ಹುಲ್ಲೇಶ್, ಹೆಚ್ ಪರಶುರಾಮ, ಚಿಮ್ನಳ್ಳಿ ಬಸವರಾಜ, ಮೃತ್ಯುಂಜಯ ಹಾಗೂ ಇತರರು ಇದ್ದರು.










