ಹೊಸಪೇಟೆ : ಭಾರಿ ಮಳೆಯಿಂದ ಹದಗೆಟ್ಟ ಮರಿಯಮ್ಮನಹಳ್ಳಿ ಪಟ್ಟಣದ ರಸ್ತೆ-ಅಧಿಕಾರಿಗಳ ವಿರುದ್ದ ಸಾರ್ವಜನಿಕರ ಆಕ್ರೋಶ…

149
firstsuddi

ಹೊಸಪೇಟೆ : ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ಹೃದಯ ಭಾಗದ ಮುಖಾಂತರ ಹಾದು ಹೋಗುವ ಹೊಸಪೇಟೆ ಹರಿಹರ ರಾಜ್ಯ ಹೆದ್ದಾರಿ 25ರ ರಸ್ತೆಯು ಮಳೆಯಿಂದಾಗಿ ಹದಗೆಟ್ಟು ಗುಂಡಿಗಳಾಗಿ ಮಾರ್ಪಟ್ಟಿದ್ದು, ಪಟ್ಟಣ ಪಂಚಾಯಿತಿ ಆಡಳಿತ ವರ್ಗ ಯಾವುದೇ ದುರಸ್ತಿ ಕಾರ್ಯಗಳನ್ನು ಮಾಡದೇ ನೋಡಿಯೂ ನೋಡದಂತೆ ಕೈಕಟ್ಟಿ ಕುಳಿತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮರಿಯಮ್ಮನಹಳ್ಳಿಯ ಹೃದಯ ಭಾಗದಲ್ಲಿರುವ ರಾಜ್ಯಹೆದ್ದಾರಿ 25ರ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು, ದಿನನಿತ್ಯ ಓಡಾಡುವ ದ್ವಿಚಕ್ರ ವಾಹನ ಸವಾರರಿಗೆ ಮತ್ತು ಇತರೆ ಭಾರಿ ವಾಹನಗಳಿಗೆ ತೊಂದರೆ ಉಂಟಾಗಿದೆ. ಇಲ್ಲಿ ಸಂಚರಿಸುವ ಚಾಲಕರು ಮತ್ತು ಬೈಕ್ ಸವಾರರು ಸ್ಥಳೀಯ ಆಡಳಿತಕ್ಕೆ ಆಡಳಿತ ವೈಖರಿಯನ್ನು ಕಂಡು ಹಿಡಿ ಶಾಪ ಹಾಕುತ್ತಿದ್ದಾರೆ. ಎಸ್‌ಬಿಐ ಬ್ಯಾಂಕ್ ಮುಂಭಾಗದ ರಸ್ತೆಯಲ್ಲಂತೂ ದೊಡ್ಡ ಪ್ರಮಾಣದಲ್ಲಿ ಗುಂಡಿಗಳು ಬಿದ್ದಿದ್ದರಿಂದ ಎಷ್ಟೋ ಭಾರಿ ದ್ವಿಚಕ್ರ ವಾಹನ ಸವಾರರು ಬಿದ್ದಿರುವ ಹಲವಾರು ಉದಾಹರಣೆಗಳಿವೆ. ರಸ್ತೆಯ ಸಣ್ಣ ಪುಟ್ಟ ದುರಸ್ತಿ ಕಾರ್ಯಕ್ಕೂ ಕೈ ಹಾಕದೇ ಪಟ್ಟಣ ಪಂಚಾಯಿತಿ ಆಡಳಿತ ವರ್ಗ ಜಾಣ ಕುರುಡು ಪ್ರದರ್ಶಿಸುತ್ತಿದ್ದು ನಾಗರಿಕರು ಹತಾಶರಾಗುವಂತೆ ಮಾಡಿದೆ.

ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವ ವಿಷಯ ತಿಳಿದ ಮರಿಯಮ್ಮನಹಳ್ಳಿ ಪಟ್ಟಣದ ಪೊಲೀಸ್ ಇಲಾಖೆಯವರು ಕೂಡಲೇ ಮುತುವರ್ಜಿವಹಿಸಿ ಪಿಎಸ್‌ಐ ಶಿವಕುಮಾರ್ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಕಾರ್ಯ ಮಾಡುತ್ತಿದ್ದ ಜಿಸಿಬಿ ಮತ್ತು ಸಿಮೆಂಟ್ ಮಿಲ್ಲರ್ ಲಾರಿಯನ್ನು ಕರೆ ತಂದು ಅವುಗಳ ಮೂಲಕ ಸಿಮೆಂಟ್‌ನಿಂದ ಈ ಗುಂಡಿಗಳನ್ನು ಮುಚ್ಚಿಸಿ ಮುಂದೆ ಸಂಭವಿಸುವ ರಸ್ತೆ ಅಪಘಾತಗಳನ್ನು ತಡೆಗಟ್ಟಲು ರಸ್ತೆ ದುರಸ್ತಿ ಕಾರ್ಯ ಮಾಡಿದ್ದಾರೆ. 

ರಸ್ತೆಯ ದುರಸ್ತಿ ಕಾರ್ಯವನ್ನು ಪಟ್ಟಣದ ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಎ.ಎಸ್.ಐ ದುರುಗಪ್ಪ, ಸಿದ್ದೇಶ್, ಕೊಟ್ರೇಶ್ ಹಾಗೂ ಇತರರು ಇದ್ದರು.

ರಸ್ತೆ ದುರಸ್ತಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಉದಯ್ ಸಿಂಗ್‌ರು, ರಸ್ತೆಯ ನಡುಮಧ್ಯೆ ಗುಂಡಿಗಳು ಬಿದ್ದಿರುವುದು ನಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ. ಅದು ಪಿಡಬ್ಲುಡಿ ಇಲಾಖೆಗೆ ಒಳಪಡುತ್ತದೆ. ಈ ಕುರಿತಾಗಿ ಆ ಇಲಾಖೆಗೆ ಪತ್ರವನ್ನು ಬರೆದಿದ್ದು, ನಮ್ಮ ಪ. ಪಂ. ವ್ಯಾಪ್ತಿಯಲ್ಲಿ ರಸ್ತೆಯ ಮೇಲೆ ನಿಂತಿರುವ ನೀರನ್ನ ಚರಂಡಿಗೆ ಹೋಗುವ ವ್ಯವಸ್ಥೆ ಹಾಗೂ ಗ್ರಾವೆಲ್(ಮಣ್ಣು)ನ್ನು ರಸ್ತೆಯ ಮೇಲೆ ನೀರು ನಿಲ್ಲದ ರೀತಿಯಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದರು.

ಈ ಕುರಿತು ಸ್ಪಷ್ಟನೆಗೆ ಪಿಡಬ್ಲುಡಿ ಇಲಾಖೆಯ ಸಹಾಯಕ ಅಭಿಯಂತರರು ರವಿನಾಯ್ಕ್ರು ದೂರವಾಣಿ ಸಂಪರ್ಕಕ್ಕೆ ಲಭ್ಯರಾಗಲಿಲ್ಲ.