10 ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ- ಮದ್ರಸಾ ಶಿಕ್ಷಕನ ಬಂಧನ…

62
firstsuddi

ಗಾಂಧಿನಗರ: ಗುಜರಾತ್‌ನ ಜುನಾಗಢ್ ಜಿಲ್ಲೆಯ ಮದ್ರಸಾವೊಂದರಲ್ಲಿ 10ಕ್ಕೂ ಅಧಿಕ ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಶಿಕ್ಷಕನನ್ನು ಹಾಗೂ ವಿದ್ಯಾರ್ಥಿಗಳ ದೂರುಗಳ ಬಗ್ಗೆ ಕ್ರಮ ಕೈಗೊಳ್ಳದ ಮದ್ರಸಾ ಟ್ರಸ್ಟಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

ವಿದ್ಯಾರ್ಥಿನಿ, ಶಿಕ್ಷಕನೊಂದಿಗೆ ಮೊಬೈಲ್‍ನಲ್ಲಿ ಮಾತನಾಡುವಾಗ ಗಮನಿಸಿದ್ದ ತಾಯಿ ಸಂಶಯದಿಂದ ಆಕೆಯನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಬಾಲಕಿಯ ತಾಯಿ ದೂರು ದಾಖಲಿಸಿದ್ದಾಳೆ. ಶಿಕ್ಷಕನ ಕೃತ್ಯ ಬಯಲಿಗೆ ಬರುತ್ತಿದ್ದಂತೆ ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದರು. ಪೊಲೀಸರು ಇಬ್ಬರನ್ನೂ ಪತ್ತೆಮಾಡಿ ಬಂಧಿಸಿದ್ದಾರೆ.

ಈ ಸಂಬಂಧ ಪೊಲೀಸರು ವಸತಿ ಶಾಲೆಗೆ ಭೇಟಿ ನೀಡಿ, ಕೆಲವು ಮುಸ್ಲಿಂ ಮುಖಂಡರ ಸಹಾಯದಿಂದ ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಚಾರಿಸಿದಾಗ, ಮದರಸಾದಲ್ಲಿ ಓದುತ್ತಿರುವ 10 ವಿದ್ಯಾರ್ಥಿಗಳು ಮುಂದೆ ಬಂದು ದೌರ್ಜನ್ಯದ ವಿಚಾರವನ್ನು ಹೇಳಿಕೊಂಡಿದ್ದಾರೆ ಮತ್ತು ಈ ವಿಚಾರ ಪೋಷಕರಿಗೆ ಅಥವಾ ಹೊರಗಿನವರಿಗೆ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವಿಚಾರವನ್ನು ಟ್ರಸ್ಟಿಗೆ ತಿಳಿಸಲಾಗಿದೆ. ಆದರೆ ಅವರು ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 377(ಅಸ್ವಾಭಾವಿಕ ಸಂಭೋಗ), 323(ಹಲ್ಲೆ), 506-2 (ಅಪರಾಧ ಬೆದರಿಕೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಅಡಿ ಕೇಸ್ ದಾಖಲಿಸಲಾಗಿದೆ.