100 ಕೋಟಿ ಲಸಿಕೆ ಕೇವಲ ಸಂಖ್ಯೆಯಲ್ಲ, ಇತಿಹಾಸದಲ್ಲಿ ಹೊಸ ಅಧ್ಯಾಯ : ಪ್ರಧಾನಿ ಮೋದಿ.

71
firstsuddi

ನವದೆಹಲಿ : 100 ಕೋಟಿ ಲಸಿಕೆ ಕೇವಲ ಸಂಖ್ಯೆಯಲ್ಲ. ಇದು ಇತಿಹಾಸದಲ್ಲಿ ಹೊಸ ಅಧ್ಯಾಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

100 ಕೋಟಿ ಲಸಿಕೆ ನೀಡುವ ಮೂಲಕ ಭಾರತ ಮೈಲಿಗಲ್ಲು ಸಾಧಿಸಿದ್ದು, ಈ ಕುರಿತು ಇಂದು ಪಿಎಂ ಮೋದಿ ದೇಶವನ್ನು ಉದ್ದೇಶಿಸಿ ಮತನಾಡಿದರು. ಇದು ದೇಶದ, ನಾಗರಿಕರ ಸಾಧನೆ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇದರ ಯಶಸ್ಸು ದಕ್ಕುತ್ತದೆ. ಈ ಸಂದರ್ಭದಲ್ಲಿ ನಾನು ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಭಾರತದ ಲಸಿಕಾಭಿಯಾನವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್’ನ ಒಂದು ಜೀವಂತ ಉದಾಹರಣೆಯಾಗಿದೆ. ವಿಐಪಿ ಸಂಸ್ಕೃತಿಯು ನಮ್ಮ ಲಸಿಕಾ ಕಾರ್ಯಕ್ರಮದ ಮೇಲೆ ಪರಿಣಾಮ ಬೀರಲಿಲ್ಲ. ಇಲ್ಲಿ ಎಲ್ಲರನ್ನೂ ಸಮಾನವಾಗಿ ಪರಿಗಣಿಸಲಾಗುತ್ತದೆ. ಭಾರತದ ಸಂಪೂರ್ಣ ವ್ಯಾಕ್ಸಿನೇಷನ್ ಕಾರ್ಯಕ್ರಮವು ವಿಜ್ಞಾನದಿಂದ ಹುಟ್ಟಿಕೊಂಡಿದ್ದು, ಇದು ಸಂಪೂರ್ಣವಾಗಿ ವೈಜ್ಞಾನಿಕ ವಿಧಾನಗಳನ್ನು ಆಧರಿಸಿದೆ ಎಂದು ಪ್ರಧಾನಿ ಹೇಳಿದರು.

ಭಾರತ ಮತ್ತು ವಿದೇಶಗಳಲ್ಲಿನ ತಜ್ಞರು ಭಾರತದ ಆರ್ಥಿಕತೆಯ ಬಗ್ಗೆ ತುಂಬಾ ಸಕಾರಾತ್ಮಕ ಭಾವನೆ ಹೊಂದಿದ್ದಾರೆ. ಇಂದು, ಭಾರತೀಯ ಕಂಪನಿಗಳಿಗೆ ದಾಖಲೆಯ ಮಟ್ಟದಲ್ಲಿ ಹೂಡಿಕೆ ಬರುತ್ತಿದೆ,ಜೊತೆಗೆ ಯುವಕರಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ ಎಂದರು. ಆಗ ನಾವು ಮೇಡ್ ಇನ್ ಆ ದೇಶ, ಮೇಡ್ ಇನ್ ಈ ದೇಶ ಅಂತಾ ಹೇಳ್ತಾ ಇದ್ವಿ.. ಆದ್ರೆ ಈಗೆಲ್ಲಾ ‘ಮೇಡ್ ಇನ್ ಇಂಡಿಯಾ’ ಆಗಿದೆ. ಇದರ ಹಿಂದೆ ಭಾರತೀಯನ ಬೆವರು ಇದೆ. ಈ ವಸ್ತುಗಳನ್ನೇ ನೀವು ಹೆಚ್ಚಾಗಿ ಖರೀದಿಸಬೇಕು. ಭಾರತದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ನಾವು ಸೆಂಟ್ರಲ್ ವಿಸ್ಟಾ, ಪಿಎಂ ಗಟಿ ಶಕ್ತಿಯಂತಹ ಯೋಜನೆಗಳನ್ನು ಪರಿಚಯಿಸಿದ್ದೇವೆ ಎಂದರು.

ಕಳೆದ ವರ್ಷ ದೀಪಾವಳಿ ಹಬ್ಬ ಆಚರಿಸಲು ಎಲ್ಲರೂ ಭಯ ಪಡ್ತಾ ಇದ್ವಿ. ಆದರೆ ಈ ಬಾರಿ ಲಸಿಕೆಯ ವಿಶ್ವಾಸವು ಭಯವನ್ನು ಕಡಿಮೆ ಮಾಡಿದೆ. ಆದರೂ ಮುಂಬರುವ ಹಬ್ಬಗಳನ್ನು ಅತ್ಯಂತ ಎಚ್ಚರಿಕೆಯಿಂದ ಆಚರಿಸಲು ನಾನು ಎಲ್ಲರನ್ನೂ ವಿನಂತಿಸುತ್ತೇನೆ ಎಂದರು.