13 ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ಆತ್ಮಹತ್ಯೆ…

50
firstsuddi

ಶಿವಮೊಗ್ಗ: ಮದುವೆಗೆ 13 ದಿನಗಳು ಇರುವಾಗ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಲು ಗ್ರಾಮದಲ್ಲಿ ನಡೆದಿದೆ.

ಚೈತ್ರ (26) ಮೃತಪಟ್ಟ ದುರ್ದೈವಿ. ಎಂಕಾಂ ಪದವಿ ಪಡೆದಿದ್ದ ಚೈತ್ರ ಕಟ್ಟೆಹಕ್ಲಿನ ರಾಮಕೃಷ್ಣ ಮೆಡಿಕಲ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಚೈತ್ರಗೆ ಮುಂದಿನ ಫೆಬ್ರವರಿ 4 ರಂದು ವಿವಾಹ ನಿಶ್ಚಯವಾಗಿತ್ತು. ಆದರೆ, ನಿನ್ನೆ ಮನೆಯ ಸ್ನಾನದ ಕೊಠಡಿ ಪಕ್ಕದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮನೆಯವರೆಲ್ಲರೂ ಚೈತ್ರಳ ಮದುವೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, ನನಗೆ ಆರೋಗ್ಯ ಸಮಸ್ಯೆ ಇದೆ. ಹಾಗಾಗಿ ನನಗೆ ಮದುವೆ ಬೇಡವೆಂದು ಚೈತ್ರ ವಿರೋಧ ಮಾಡುತ್ತಿದ್ದಳು ಎನ್ನಲಾಗಿದೆ. ಆದರೂ ಮನೆಯವರು ಮನವೊಲಿಸಿದ್ದರು ಎನ್ನಲಾಗಿದೆ.

ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.