ಗಾಂಧಿನಗರ : ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದ್ದು, ಹೀಗಾಗಿ ಪೊಲೀಸರು ರಾತ್ರಿ ಹಗಲು ಎನ್ನದೇ ತಮ್ಮ ಕುಟುಂಬಸ್ಥರಿಂದ ದೂರವಿದ್ದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಂತೆ ಮಹಿಳಾ ಪೇದೆಯೊಬ್ಬರು ತಮ್ಮ 14 ತಿಂಗಳ ಕಂದಮ್ಮನನ್ನು ತಮ್ಮ ಕಂಕುಳಲ್ಲೇ ಎತ್ತಿಕೊಂಡೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗುಜರಾತ್‍ನ ಕಚ್ ಎಂಬಲ್ಲಿ ಅಲ್ಕಾ ದೇಸಾಯಿ ಎಂಬ ಮಹಿಳಾ ಪೇದೆ ತಮ್ಮ ಮಗುವನ್ನು ಎತ್ತಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಅಲ್ಕಾ ದೇಸಾಯಿ ಅವರ ಪತಿಯೂ ಕೂಡಾ ಪೊಲೀಸ್ ಕಾನ್‍ಸ್ಟೇಬಲ್ ಆಗಿದ್ದು, ಇವರು ಎಸ್‍ಪಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲದೇ ಇರುವುದರಿಂದ ಮಹಿಳಾ ಪೇದೆ ತಮ್ಮ ಮಗುವನ್ನು ಎತ್ತಿಕೊಂಡೇ ಕಾರ್ಯನಿರ್ವಹಿಸುತ್ತಿದ್ದು, ಮಹಿಳಾ ಪೇದೆಯ ಈ ಕರ್ತವ್ಯ ನಿಷ್ಠೆಗೆ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್ ಆಗುತ್ತಿದ್ದಂತೆ ಐಜಿಪಿ ಅವರು ಮಹಿಳಾ ಪೇದೆಗೆ ಪೊಲೀಸ್ ಠಾಣೆಯಲ್ಲೇ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.










