ಗುರುಗ್ರಾಮ : 14 ವರ್ಷದ ಬಾಲಕಿ ಮೇಲೆ ನೆರೆ ಮನೆಯ ವ್ಯಕ್ತಿಯೋರ್ವ ಎರಡು ತಿಂಗಳ ಕಾಲ ಪದೇ-ಪದೇ ಅತ್ಯಾಚಾರವೆಸಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಆರೋಪಿಯು ಬಾಲಕಿಯನ್ನು ನಾಲ್ಕು ದಿನಗಳ ಹಿಂದೆ ಅಪಹರಿಸಿದ್ದ. ನಂತರ ಬಾಲಕಿಯ ಕುಟುಂಬಸ್ಥರು ಆಕೆಯನ್ನು ಹುಡುಕುತ್ತಿದ್ದು, ಬುಧವಾರ ತಡರಾತ್ರಿ ದೆಹಲಿ-ಜೈಪುರ ಹೆದ್ದಾರಿಯ ಬಿಲಾಸ್ ಪುರ ಚೌಕ್ ಬಳಿ ಪತ್ತೆ ಮಾಡಿದ್ದಾರೆ. ಬಾಲಕಿ ತನಗಾದ ಸಮಸ್ಯೆಗಳ ಬಗ್ಗೆ ತನ್ನ ಕುಟುಂಬ ಸದಸ್ಯರಿಗೆ ಸಂಪೂರ್ಣವಾಗಿ ವಿವರಿಸಿದ್ದಾಳೆ. ಈ ಹಿನ್ನೆಲೆ ಬಾಲಕಿ ತಂದೆ ಪೊಲೀಸರಿಗೆ ದೂರು ಕೊಟ್ಟಿದ್ದು, ದೂರಿನ ಆಧಾರದ ಮೇರೆಗೆ ಬಿಲಾಸ್ ಪುರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
ಆರೋಪಿಯು ಬಿಲಾಸ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹಳ್ಳಿಯೊಂದರಲ್ಲಿ ಬಾಲಕಿ ನೆರೆಮನೆಯಲ್ಲಿ ವಾಸಿಸುತ್ತಿದ್ದನು. ಬಾಲಕಿಯು 8ನೇ ತರಗತಿ ಓದುತ್ತಿದ್ದಳು. ಆಕೆಗೆ ಮದುವೆ ಮಾಡಿಕೊಳ್ಳುವುದಾಗಿ ಆಮಿಷವೊಡ್ಡಿ ಎರಡು ತಿಂಗಳ ಕಾಲ ಪದೇ ಪದೇ ಅತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಜುಲೈ 8 ರಂದು ಆರೋಪಿಗಳು ನನ್ನನ್ನು ಅಪಹರಿಸಿದ್ದರು. ಈ ವೇಳೆ ಅವರು ನನ್ನ ಮೇಲೆ ಅತ್ಯಾಚಾರ ಎಸಗಿದ್ದು, ನನ್ನ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿ ತಿಳಿಸಿದ್ದಾಳೆ.
ಈ ಕುರಿತು ಬಿಲಾಸ್ ಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ(ಎಸ್ ಎಚ್ ಒ) ಅಜಯ್ ಕುಮಾರ್ ಮಾತನಾಡಿದ್ದು, ಐಪಿಸಿ ಸೆಕ್ಷನ್ 363(ಅಪಹರಣಕ್ಕೆ ಶಿಕ್ಷೆ), 366 ಎ(ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಕೃತ್ಯ) ಮತ್ತು 506(ಅಪರಾಧದ ಬೆದರಿಕೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(POCSO) ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದ್ದು, ಆರೋಪಿಗಳಿಗಾಗಿ ತೀವ್ರ ತನಿಖೆ ನಡೆಯುತ್ತಿದೆ ಎಂದಿದ್ದಾರೆ.










