15 ಗುಂಟೆ ಜಮೀನಿಗಾಗಿ ಅಣ್ಣ-ಅತ್ತಿಗೆಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ತಮ್ಮ!

66
firstsuddi

ಮೈಸೂರು: ವ್ಯಕ್ತಿಯೊಬ್ಬ 15 ಗುಂಟೆ ಜಮೀನಿಗಾಗಿ ಅಣ್ಣ ಮತ್ತು ಅತ್ತಿಗೆಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ನರಸೀಪುರ ತಾಲೂಕಿನ ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಪತಿ ಶಿವಲಿಂಗೇಗೌಡ(55), ಪತ್ನಿ ಭಾರತಿ(47) ಮೃತ ದುರ್ದೈವಿಗಳು. ಶಿವಲಿಂಗೇಗೌಡ ಸಹೋದರ ಹನುಮಂತೇಗೌಡ (50) ಕೊಲೆ ಮಾಡಿದ ಆರೋಪಿ. 15 ಗುಂಟೆ ಜಮೀನಿಗಾಗಿ ಸಹೋದರರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಕಳೆದ ಮೂರ್ನಾಲ್ಕು ವರ್ಷಗಳಿಂದ ಊರಿನ ಹಿರಿಯರು ರಾಜಿ ಪಂಚಾಯಿತಿ ನಡೆಸುತ್ತಾ ಬಂದಿದ್ದರು. ರಾಜೀ ಸಂಧಾನಕ್ಕೂ ಒಪ್ಪದ ಸಹೋದರರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

ನಿನ್ನೆ ಮದ್ಯಾಹ್ನ ಶಿವಲಿಂಗೇಗೌಡ ಹಾಗೂ ಪತ್ನಿ ಭಾರತಿ ತಮ್ಮ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಹನುಮಂತೇಗೌಡ ತನ್ನ ಅಣ್ಣ ಶಿವಲಿಂಗೇಗೌಡ, ಅತ್ತಿಗೆ ಭಾರತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ಬಳಿಕ ಹನುಮಂತು ತಾನೇ ಪೊಲೀಸ್ ಠಾಣೆಗೆ ಕರೆ ಮಾಡಿ, ಅಣ್ಣ ಅತ್ತಿಗೆಯನ್ನು ನಾನೇ ಕೊಲೆ ಮಾಡಿದ್ದೇನೆ ಎಂದು ಹೇಳಿ ಸ್ವಲ್ಪ ಹೊತ್ತಿನ ಬಳಿಕ ತಾನೇ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.