ಬೆಂಗಳೂರು : ಆ್ಯಪ್ ಆಧಾರಿತ ಆಟೋ ಸೇವೆಗೆ 15 ದಿನದಲ್ಲಿ ಪ್ರಯಾಣ ಶುಲ್ಕ ನಿಗದಿಪಡಿಸಲು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.
ಆ್ಯಪ್ ಆಧಾರಿತ ಓಲಾ, ಉಬರ್ ಆಟೋ ಸೇವೆ ಒದಗಿಸದಂತೆ ಇತ್ತೀಚೆಗೆ ಸರ್ಕಾರ ಹೊರಡಿಸಿದ ಆದೇಶ ರದ್ದುಪಡಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ಪೀಠ ಈ ಸೂಚನೆ ನೀಡಿತು.
ಸರ್ಕಾರ ಯಾವುದೇ ಬಲವಂತದ ಕ್ರಮಕೈಗೊಳ್ಳುವಂತೆ ಇಲ್ಲ. ಓಲಾ, ಉಬರ್ ಕಂಪನಿ ಅನುಕೂಲಕರ ದರವನ್ನು ವಿಧಿಸಬೇಕು ಎಂದು ಆದೇಶಿಸಿರುವ ಕರ್ನಾಟಕ ಹೈಕೋರ್ಟ್ ಪರವಾನಿಗೆ ಕಾಲಾವಕಾಶ ವಿಸ್ತರಿಸುವಂತೆ ಆದೇಶ ನೀಡಿದೆ.
2021ರ ಸಾರಿಗೆ ಇಲಾಖೆ ನಿಗದಿ ಪಡಿಸಿದ ದರವನ್ನು ಪಾಲಿಸಬೇಕು. ಹೆಚ್ಚುವರಿ ಸರ್ವಿಸ್ ಚಾರ್ಜ್ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು ಎಂದಿರುವ ಹೈಕೋರ್ಟ್ 10 ರಿಂದ 15 ದಿನದ ಒಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿಕೆ ಮಾಡಿದೆ.
ಓಲಾ, ಉಬರ್, ರಾಪಿಡೊ ಕಂಪನಿಗಳ ಆ್ಯಪ್ ಗಳಲ್ಲಿ ಆಟೋ ಸೇವೆ ಅಕ್ಟೋಬರ್ 12ರಿಂದ ಸ್ಥಗಿತವಾಗಿದೆ. ಮಂಗಳವಾರ ಶಾಂತಿನಗರದ ಸಾರಿಗೆ ಇಲಾಖೆ ಕೇಂದ್ರ ಕಚೇರಿಯಲ್ಲಿ ಓಲಾ- ಉಬರ್ ಸಂಸ್ಥೆ ಜೊತೆ ಸಾರಿಗೆ ಇಲಾಖೆ ಆಯುಕ್ತ ಟಿ.ಹೆಚ್.ಎಂ ಕುಮಾರ್ ಸಭೆ ನಡೆಸಿದ್ರು. ಬಳಿಕ ಮಾತನಾಡಿದ ಅವರು, ನಿಯಮದ ಪ್ರಕಾರ ಆಟೋ ಸೇವೆ ಒದಗಿಸಲು ಈ ಕಂಪನಿಗಳಿಗೆ ಅನುಮತಿ ಇಲ್ಲ. ಈ ಸಂಬಂಧ ಸಭೆಯಲ್ಲಿ ಸಂಸ್ಥೆಗಳಿಗೆ ಮನವರಿಕೆ ಮಾಡಲಾಗಿದೆ. ಒಂದು ವೇಳೆ ಸೂಚನೆ ಪಾಲಿಸದೇ ಇದ್ದರೇ ಐದು ಸಾವಿರ ದಂಡ ಹಾಗೂ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.










