ಬಣಕಲ್ : ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಒಟ್ಟು 15 ಸಾವಿರ ಮಾಸ್ಕ್‍ಗಳ ಬೇಡಿಕೆಯಿದೆ. ಸ್ಯಾನಿಟೈಸರ್ ಹಾಗೂ ಗ್ಲೌಸ್‍ಗಳ ಕೊರತೆಯು ಎದುರಾಗಿದ್ದು ಇದರ ಬಗ್ಗೆ ವಿವಿಧ ಗ್ರಾಮ ಪಂಚಾಯಿತಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುತ್ತದೆ ಎಂದು ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿ ವೆಂಕಟೇಶ್ ಹೇಳಿದರು.
ಅವರು ಕೊಟ್ಟಿಗೆಹಾರದ ತರುವೆ ಗ್ರಾಮ ಪಂಚಾಯಿತಿ ಹಾಗೂ ಬಣಕಲ್ ಗ್ರಾಮ ಪಂಚಾಯಿತಿಗೆ ಬೇಟಿ ನೀಡಿ ಮಾತನಾಡಿ, ಜಿಲ್ಲಾಡಳಿತದ ಆದೇಶದ ಮೇರೆಗೆ ಅನೇಕ ತಾಲೂಕು ಟಾಸ್ಕ್‍ಪೋರ್ಸ್ ಕಮಿಟಿಯಿಂದ ಅನೇಕ ಮುಂಜಾಗರೂಕತೆಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಟಾಸ್ಕ್‍ಪೋರ್ಸ್ ಕಮಿಟಿಯೂ ರಚನೆಯಾಗಿದೆ. ಮಾಸ್ಕ್ ಗಳ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಹಾಗಾಗಿ ಸಿಇಒ ಅವರ ಆದೇಶದಂತೆ ತಾಲ್ಲೂಕುಗಳಲ್ಲಿ ಸ್ವಸಹಾಯ ಸಂಘಗಳನ್ನು ಗುರುತಿಸಿ ಅವರ ಮುಖಾಂತರ ಗ್ರಾಮ ಪಂಚಾಯಿತಿ ಅನುಧಾನದಲ್ಲಿ ಗುಣಮಟ್ಟದ ಬಟ್ಟೆಗಳನ್ನು ತರಿಸಿ ಮಾಸ್ಕ್ ತಯಾರಿಸಿ ಸಿದ್ದ ಪಡಿಸಿದ ನಂತರ ಜಿಲ್ಲಾ ಆರೋಗ್ಯ ಅಧಿಕಾರಿಗಳ ಮುಖಾಂತರ ಪರೀಕ್ಷಿಸಲಾಗುವುದು ಎಂದರು.
ತರುವೆ, ಬಣಕಲ್ ಗ್ರಾಮ ಪಂಚಾಯಿತಿಯಲ್ಲಿ ಪ್ರಪ್ರಥಮವಾಗಿ ಮಾಸ್ಕ್ ಸಿಧ್ದಪಡಿಸಲು ತರಬೇತಿ ನೀಡಲಾಗಿದ್ದು ಕೆಲವು ಮಾಸ್ಕ್‍ಗಳನ್ನು ಶಿಬಿರಾರ್ಥಿಗಳು ಪ್ರಾಯೋಗಿಕವಾಗಿ ಮಾಡಿಕೊಟ್ಟಿದ್ದಾರೆ. ಅವುಗಳ ಗುಣಮಟ್ಟವನ್ನು ಮತ್ತೊಮ್ಮೆ ಪರಿಶೀಲಿಸಲಾಗುತ್ತಿದೆ. ಒಂದು ಮೀಟರ್‍ನಲ್ಲಿ ಒಂಬತ್ತು ಮಾಸ್ಕ್ ತಯಾರಿಸಲಾಗುತ್ತದೆ. ತುರ್ತು ಸೇವೆ ನೀಡುವವರಿಗೆ ಹಾಗೂ ಸಿಬ್ಬಂದಿಯವರಿಗೆ, ಎನ್‍ಜಿಒಗಳಿಗೆ ಹಾಗೂ ಸಾರ್ವಜನಿಕರಿಗೆ ಮತ್ತು ಇಲ್ಲಿರುವ ದೂರದ ಪ್ರವಾಸಿಗರಿಗೂ ಪೂರೈಕೆ ಮೇರೆಗೆ ಮಾಸ್ಕ್ ನೀಡಲು ಕ್ರಮ ಕೈಗೊಂಡಿದ್ದೇವೆ. ತಾಲ್ಲೂಕಿನ ಒಟ್ಟು 29 ಗ್ರಾಮ ಪಂಚಾಯಿತಿಗಳಿಗೆ ಮಾಸ್ಕ್ ವ್ಯವಸ್ಥೆ ಮಾಡಲು ತೀರ್ಮಾನಿಸಿದ್ದೇವೆ. ಶೀಘ್ರವೇ ಇದಕ್ಕೆ ಚಾಲನೆ ನೀಡಲಿದ್ದೇವೆ ಎಂದರು. ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಮುಂಜಾಗರೂಕತಾ ಕ್ರಮಗಳ ಬಗ್ಗೆ ಇಒ ವೆಂಕಟೇಶ್ ಬೇಟಿ ನೀಡಿ ಸ್ಥಳವನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿಗಳಾದ ಡಾ.ಮಧುಸೂದನ್, ತರುವೆ ಗ್ರಾಮ ಪಂಚಾಯಿತಿ ಪಿಡಿಒ ಕೆ.ವಿ.ಶಾರದಾ, ಬಿಎನ್.ಕೃಷ್ಣಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರವಿಕಲಾ ಪೈ, ಜಿ.ಸತೀಶ್ ಹಾಗೂ ಪಂಚಾಯಿತಿ ಸಿಬ್ಬಂದಿಗಳು, ಆರೋಗ್ಯ ಮಹಿಳಾ ಸಹಾಯಕಿ ಶಾಂತಮ್ಮ, ಕುಮುದಾ, ಆಶಾಕಾರ್ಯಕರ್ತೆಯರು ಇದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಕೊರೊನಾ ವೈರಸ್ ತಡೆಗಟ್ಟಲು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ 15 ಸಾವಿರ ಮಾಸ್ಕ್...










