15 ದಿನಗಳಿಂದ ಮಗುವನ್ನು ನೋಡದೆ ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿದ್ದ ನರ್ಸ್‍ಗೆ ಕರೆ ಮಾಡಿ ಧೈರ್ಯ ತುಂಬಿದ ಸಿಎಂ ಬಿಎಸ್‍ವೈ…

258
firstsuddi

ಬೆಂಗಳೂರು : ಕಳೆದ 15 ದಿನಗಳಿಂದ ಮಗುವನ್ನು ಬಿಟ್ಟು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಬೆಳಗಾವಿಯ ನರ್ಸ್ ಹಾಗೂ ಮಗುವಿನ ಕಣ್ಣೀರಿಗೆ ಮರುಗಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ವತಃ ತಾವೇ ನರ್ಸ್‍ಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ಮಹಾಮಾರಿ ಕೊರೊನಾ ವೈರಸ್‍ಗೆ ಬೆಳಗಾವಿಯಲ್ಲಿ 7ಮಂದಿ ತುತ್ತಾಗಿದ್ದು, ಹೀಗಾಗಿ ಬೆಳಗಾವಿಯ ಭಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ವಾರ್ಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನರ್ಸ್ ಸುನಂದಾ ಅವರು 15 ದಿನಗಳಿಂದ ಮನೆಗೆ ಹೋಗದೆ ಇದ್ದುದರಿಂದ ಅಮ್ಮನನ್ನು ನೋಡಬೇಕು ಎಂದು ನಿನ್ನೆ ಆಸ್ಪತ್ರೆ ಬಳಿ ಬಂದಿದ್ದ ಸುನಂದಾ ಅವರ ಮೂರು ವರ್ಷದ ಮಗಳು ಐಶ್ವರ್ಯ ಆಸ್ಪತ್ರೆ ಮುಂದೆಯೇ ಅಮ್ಮ ಬಾ ಅಮ್ಮ ಮನೆಗೆ ಹೋಗೋಣ, ಅಮ್ಮ ಬೇಕು ಎಂದು ಅಳುತ್ತಿದ್ದ ದೃಶ್ಯವನ್ನು ನೋಡಿ ಎಲ್ಲರ ಕಣ್ಣಂಚಿನಲ್ಲಿ ನೀರು ತುಂಬಿತ್ತು.
ಈ ದೃಶ್ಯವನ್ನು ನೋಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು, ಸುನಂದಾ ಅವರಿಗೆ ಕರೆ ಮಾಡಿ ನಿಮ್ಮ ಜೊತೆ ನಾವಿದ್ದೇವೆ, ಸರ್ಕಾರವಿದೆ, ಯಾವುದೇ ಕಾರಣಕ್ಕೂ ಭಯಪಡಬೇಡಿ. ನಿಮ್ಮ ಸೇವೆಗೆ ಸರ್ಕಾರ ಸದಾ ಗೌರವ ಕೊಡುತ್ತದೆ. ಮಗುವನ್ನು ನೋಡದೆ ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೀರಿ. ಇನ್ನು ಸ್ವಲ್ಪ ದಿನ ಸಹಕಾರ ನೀಡಿ. ನಿಮಗೆ ಮುಂದೆ ಒಳ್ಳೆಯ ಅವಕಾಶ ಸಿಗಲಿದೆ ಎಂದು ಧೈರ್ಯ ತುಂಬಿದರು.