ಬೆಳಗಾವಿ: ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಮೇಲೆ ಮಾಡಿದ್ದ 150 ಕೋಟಿ ರೂ. ಆಮಿಷ ಆರೋಪ ವಿಧಾನಸಭೆಯಲ್ಲಿ ಇಂದು ಪ್ರಸ್ತಾಪವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ವಾಕ್ಸಮರಕ್ಕೆ ಕಾರಣವಾಯಿತು. ಕಲಾಪ ಆರಂಭವಾಗುತ್ತಿದ್ಧಂತೆಯೇ ಸ್ಪೀಕರ್ ಯು.ಟಿ.ಖಾದರ್ ಅವರು, ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಅವಕಾಶ ಕೊಟ್ಟರು. ಈ ಸಂದರ್ಭದಲ್ಲಿ ಎದ್ದು ನಿಂತ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು, ವಕ್ಫ್ ವಿಚಾರವನ್ನು ಪ್ರಸ್ತಾಪಿಸಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನಮ್ಮ ಶಾಸಕ ಬಿ.ವೈ.ವಿಜಯೇಂದ್ರ ವಿರುದ್ಧ ಮೊನ್ನೆ ಸದನದಲ್ಲಿ ಆರೋಪ ಮಾಡಿದ್ದಾರೆ. ಆದರೆ, ಅವರು ಮಾತನಾಡುವುದಕ್ಕೆ ಮೊದಲೇ ನೋಟಿಸ್ ಕೊಡಬೇಕಿತ್ತು ಎಂದು ಪ್ರಶ್ನೆ ಮಾಡಿದರು. ಆಗ ಸಚಿವ ಪ್ರಿಯಾಂಕ್ ಖರ್ಗೆ ಎದ್ದು ನಿಂತು, ನಾನು ಆರೋಪ ಮಾಡಿಲ್ಲ, ಅನ್ವರ್ ಮಾಣಿಪ್ಪಾಡಿ ಆರೋಪ ಮಾಡಿದ್ದು, ಅದನ್ನೇ ನಾನು ಹೇಳಿದ್ದೇನೆ ಎಂದರು. ಆಗ ಪ್ರಿಯಾಂಕ್ ಖರ್ಗೆ ಆರೋಪದ ಬಗ್ಗೆ ಬಿಜೆಪಿ ನಾಯಕರು ಚರ್ಚೆಗೆ ಅವಕಾಶ ಕೇಳಿದರು. ಆದರೆ, ಚರ್ಚೆಗೆ ಅವಕಾಶ ನೀಡದ ಸ್ಪೀಕರ್ ಯು.ಟಿ.ಖಾದರ್ ಅವರು, ಇದರ ಬಗ್ಗೆ ಸ್ಪಷ್ಟನೆ ನೀಡುವಂತೆ ವಿಜಯೇಂದ್ರ ಅವರಿಗೆ ಸೂಚಿಸಿದರು. ಈ ವೇಳೆ ಬಿ.ವೈ.ವಿಜಯೇಂದ್ರ ಮಾತನಾಡಿ, ”ನನ್ನ ಮೇಲೆ ಸದನದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನನ್ನ ಅನುಪಸ್ಥಿತಿಯಲ್ಲಿ ಗುರುತರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರ ದುರುಪಯೋಗಪಡಿಸಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ನನ್ನ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. ಅದಕ್ಕೆ ನನಗೆ ಅವರ ಮೇಲೆ ಆಕ್ರೋಶವಿಲ್ಲ, ಬದಲಿಗೆ ಅನುಕಂಪ ಹುಟ್ಟುತ್ತಿದೆ. ಹಗರಣಗಳ ಸರಮಾಲೆಯಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ರಕ್ಷಿಸಲು ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.










