ಇಂದು ನಟ ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಅವರ 16ನೇ ವಿವಾಹ ವಾರ್ಷಿಕೋತ್ಸವ. ಅಗಲಿದ ಪತ್ನಿಗೆ ವಿಜಯ ರಾಘವೇಂದ್ರ ಭಾವುಕ ಸಾಲುಗಳ ಮೂಲಕ ವಿಶ್ ಮಾಡಿದ್ದಾರೆ.
ವಿಜಯ-ಸ್ಪಂದನಾ ಅವರು ಪ್ರೀತಿಸಿ ಗುರುಹಿರಿಯರ ಸಮ್ಮತಿ ಪಡೆದು ಆಗಸ್ಟ್ 26ರಂದು 2017ರಲ್ಲಿ ವಿವಾಹವಾದರು. ಅವರ ಪ್ರೀತಿಗೆ ಶೌರ್ಯ ಎಂಬ ಪುತ್ರ ಸಾಕ್ಷಿಯಾಗಿದ್ದಾರೆ. ವಿವಾಹ ವಾರ್ಷಿಕೋತ್ಸವದ ಸಲುವಾಗಿ ವಿಜಯ್, ಪತ್ನಿಯ ನೆನೆದು ಭಾವನಾತ್ಮಕ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ.
‘ಚಿನ್ನಾ.. ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ,
ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ,
ಬದುಕನ್ನು ಕಟ್ಟಿ ಸರ್ವಸ್ವವಾದೆ,
ಉಸಿರಲ್ಲಿ ಬೆರೆತು ಜೀವಂತವಾದೆ,
ಮುದ್ದಾದ ನಗುವಿನಲ್ಲಿದ್ದಿದ್ದ ಶಕ್ತಿ ಪರ್ವತದಷ್ಟು,
ಮರೆಯದೆ.. ತೊರೆಯದೆ ಎದೆಗೊತ್ತಿ ಪ್ರೀತಿಸುವೆ’ ಎಂದು ಪ್ರೀತಿಯ ಸಾಲುಗಳನ್ನು ವೀಡಿಯೊದಲ್ಲಿ ಬರೆದುಕೊಂಡಿದ್ದಾರೆ.
ಪತ್ನಿಯ ನಿಧನದಿಂದ ಮೌನಕ್ಕೆ ಶರಣಾಗಿದ್ದ ವಿಜಯ್ ಮೊನ್ನೆಯಷ್ಟೇ ಸ್ಪಂದನಾ ಬಗ್ಗೆ ಭಾವುಕರಾಗಿ ವೀಡಿಯೋ ಮೂಲಕ ಮನದಾಳದ ಭಾವನೆಗಳನ್ನ ಅಕ್ಷರ ರೂಪಕ್ಕೆ ಇಳಿಸಿದ್ದರು. ಸ್ಪಂದನಾ.. ಹೆಸರಿಗೆ ತಕ್ಕ ಜೀವ. ಉಸಿರಿಗೆ ತಕ್ಕ ಭಾವ. ಅಳತೆಗೆ ತಕ್ಕ ನುಡಿ. ಬದುಕಿಗೆ ತಕ್ಕ ನಡೆ. ನಮಗೆಂದೇ ಮಿಡಿದ ನಿನ್ನ ಹೃದಯವ. ನಿಲ್ಲದು ನಿನ್ನೊಂದಿಗಿನ ಕಲರವ. ನಾನೆಂದೂ ನಿನ್ನವ. ಕೇವಲ ನಿನ್ನವ ಎಂದು ವಿಜಯ ರಾಘವೇಂದ್ರ ಭಾವನ್ಮಾತಕವಾಗಿ ಸಾಲುಗಳನ್ನು ಬರೆದುಕೊಂಡಿದ್ದರು.
ವಿಜಯ ರಾಘವೇಂದ್ರ ನಟನೆಯ ‘ಕದ್ದ ಚಿತ್ರ’ ಆಗಸ್ಟ್ 25ರಂದು ರಿಲೀಸ್ ಆಗಬೇಕಿತ್ತು. ಆದರೆ, ವಿಜಯ್ ನೋವಿನಲ್ಲಿರುವುದರಿಂದ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಲಾಗಿದೆ.










